Asianet Suvarna News Asianet Suvarna News

ಶಿಕ್ಷಕರಿಗೆ 6 ತಿಂಗಳಿನಿಂದ ವೇತನ ಇಲ್ಲ!

ಹಣಕಾಸು ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರುಗಳ (ಡಿಡಿಪಿಐ) ಎಡವಟ್ಟಿನಿಂದ ಹಲವು ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಸ್‌ಎಂಎ) ಶಾಲೆ ಶಿಕ್ಷಕರು ಕಳೆದ ಆರು ತಿಂಗಳಿನಿಂದ ವೇತನವಿಲ್ಲದೆ ತೊಂದರೆಯಲ್ಲಿ ಸಿಲುಕಿದ್ದಾರೆ. 

No Salary For Teacher From 6 Month
Author
Bengaluru, First Published Sep 5, 2018, 7:10 AM IST

ಮಂಗಳೂರು :  ಶಿಕ್ಷಕರ ದಿನಾಚರಣೆಯನ್ನು ಸರ್ಕಾರ ಸೆ.5ರಂದು ಅದ್ಧೂರಿಯಾಗಿ ಆಚರಿಸುತ್ತಿದ್ದರೆ ರಾಜ್ಯದ ಸಹಸ್ರಾರು ಶಿಕ್ಷಕರ ಮೊಗದಲ್ಲಿ ಮಾತ್ರ ನಗುವಿಲ್ಲ. ಕಾರಣ ಹಣಕಾಸು ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರುಗಳ (ಡಿಡಿಪಿಐ) ಎಡವಟ್ಟಿನಿಂದ ಹಲವು ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಸ್‌ಎಂಎ) ಶಾಲೆ ಶಿಕ್ಷಕರು ಕಳೆದ ಆರು ತಿಂಗಳಿನಿಂದ ವೇತನವಿಲ್ಲದೆ ತೊಂದರೆಯಲ್ಲಿ ಸಿಲುಕಿದ್ದಾರೆ. ಈ ಕುರಿತು ಸಂಬಂಧಪಟ್ಟಡಿಡಿಪಿಐಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ವೇತನ ಸಮಸ್ಯೆ ಶಿಕ್ಷಕರಿಗೆ ಮಾತ್ರವಲ್ಲ, ಸಮಸ್ಯೆ ಉದ್ಭವಿಸಿರುವ ತಾಲೂಕುಗಳ ಶಿಕ್ಷಣ ಇಲಾಖೆ ಸಿಬ್ಬಂದಿಗೂ 2-3 ತಿಂಗಳಿಂದ ವೇತನ ಸಿಕ್ಕಿಲ್ಲ. ಮಾತ್ರವಲ್ಲ, ಕೆಲವು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ವೇತನ ಆಗಿಲ್ಲ. ಈ ಸಮಸ್ಯೆ ಮಾಚ್‌ರ್‍ ತಿಂಗಳಲ್ಲೇ ಆರಂಭವಾಗಿತ್ತು. ಹಣಕಾಸು ಇಲಾಖೆ ಮಾಡಿದ ಸಣ್ಣ ತಪ್ಪನ್ನು ಆಗಲೇ ಸರಿಪಡಿಸುತ್ತಿದ್ದರೆ ಇಂದು ಸಮಸ್ಯೆದೊಡ್ಡದಾಗುತ್ತಿರಲಿಲ್ಲ. ಸಮಸ್ಯೆ ಸರಿಪಡಿಸದೇ ಹೋದಲ್ಲಿ ಮುಂದಿನ ಫೆಬ್ರವರಿ ತಿಂಗಳವರೆಗೂ ಶಿಕ್ಷಕರು ವೇತನವಿಲ್ಲದೆ ಕೆಲಸ ಮಾಡಬೇಕಾದ ಶಿಕ್ಷೆಗೆ ಗುರಿಯಾಗಲಿದ್ದಾರೆ ಎನ್ನಲಾಗಿದೆ.

ವೇತನ ಅದಲು ಬದಲು:  ನಿಯಮ ಪ್ರಕಾರ ಜಿಲ್ಲೆಯ ವೇತನ ಬೇಡಿಕೆಯ ವಿವರವನ್ನು ಜಿಲ್ಲಾ ಪಂಚಾಯಿತಿಯು ಹಣಕಾಸು ಇಲಾಖೆಗೆ ಸಲ್ಲಿಸಬೇಕು. ಬಳಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಇಡೀ ವರ್ಷದ ವೇತನ ಅನುದಾನವನ್ನು 2-3 ಕಂತುಗಳಲ್ಲಿ ಆನ್‌ಲೈನ್‌ನಲ್ಲಿ ಹಣಕಾಸು ಇಲಾಖೆ ಆಯಾ ಜಿಲ್ಲೆ, ತಾಲೂಕುಗಳಿಗೆ ಹಂಚಿಕೆ ಮಾಡುತ್ತದೆ. ತಾಲೂಕು ಪಂಚಾಯಿತಿ ಖಜಾನೆಗಳ ಮೂಲಕ ಶಿಕ್ಷಕರಿಗೆ ವೇತನ ಬಟವಾಡೆಯಾಗುತ್ತದೆ. ಆದರೆ ಪ್ರಸ್ತುತ ಹಣಕಾಸು ವರ್ಷದ ಆರಂಭದಲ್ಲೇ ಹಣಕಾಸು ಇಲಾಖೆಯು ಆನ್‌ಲೈನ್‌ ವ್ಯವಸ್ಥೆಯಲ್ಲಿ ಎಡವಟ್ಟು ಮಾಡಿದೆ. ಒಂದು ತಾಲೂಕಿಗೆ ಹೋಗಬೇಕಾದ ಅನುದಾನವನ್ನು ಇನ್ನೊಂದು ತಾಲೂಕಿಗೆ ವರ್ಗಾಯಿಸಿದೆ. ಅಲ್ಲದೆ, ಕೆಲವು ತಾಲೂಕುಗಳ ಅನುದಾನದ ಮೊತ್ತ ಹಂಚಿಕೆಯಲ್ಲೂ ವ್ಯತ್ಯಾಸ ಮಾಡಿದೆ. ಇನ್ನು ಸರ್ವ ಶಿಕ್ಷಾ ಅಭಿಯಾನದ ಶಿಕ್ಷಕರಿಗೆ ಕೆಲವೆಡೆ ವೇತನ ಹಂಚಿಕೆಯೇ ವಿಳಂಬವಾಗಿದೆ.

ಹೀಗೆ ಅನುದಾನ ಹಂಚಿಕೆಯನ್ನು ಅದಲು ಬದಲು ಮಾಡಿದ್ದರಿಂದ ಹೆಚ್ಚು ಶಿಕ್ಷಕರಿರುವ ತಾಲೂಕಿಗೆ ಕಡಿಮೆ ಅನುದಾನ ಬಂದು ವೇತನ ನೀಡಲು ಸಾಧ್ಯವಾಗಿರಲಿಲ್ಲ. ಕೊನೆಗೆ ಶಿಕ್ಷಕರು, ಅಧಿಕಾರಿಗಳು ಗಮನಕ್ಕೆ ತಂದ ಬಳಿಕ ಮಾಚ್‌ರ್‍ನಿಂದ ಮೇ ತಿಂಗಳವರೆಗಿನ ವೇತನವನ್ನು ಜೂನ್‌ನಲ್ಲಿ ವಿತರಿಸಲಾಗಿತ್ತು. ಅಲ್ಲದೆ, ಮುಂದಿನ ಕಂತಿನ ಅನುದಾನ ಹಂಚಿಕೆ ಸಂದರ್ಭ ಎಡವಟ್ಟು ಸರಿ ಮಾಡುವುದಾಗಿಯೂ ಭರವಸೆ ನೀಡಲಾಗಿತ್ತು. ಆದರೆ ತಪ್ಪು ಸರಿಪಡಿಸದೆ 2019ರ ಫೆಬ್ರವರಿ ತಿಂಗಳವರೆಗಿನ 2ನೇ ಕಂತಿನ ಅನುದಾನವನ್ನು ಜುಲೈ ತಿಂಗಳಲ್ಲಿ ಹಂಚಿಕೆ ಮಾಡಿದೆ. ಈ ಅನುದಾನ ಕೆಲವು ತಾಲೂಕುಗಳಿಗೆ ಕೇವಲ 2-3 ತಿಂಗಳಿಗಷ್ಟೇ ಸಾಕಾಗಿದೆ. ಇನ್ನು 2019ರ ಫೆಬ್ರವರಿವರೆಗೆ ಶಿಕ್ಷಕರಿಗೆ ವೇತನ ನೀಡಲು ಅನುದಾನವೇ ಇಲ್ಲ!

ಆರ್‌ಎಸ್‌ಎಂಎ ಶಿಕ್ಷಕರ ಮಾಹಿತಿಯನ್ನು ಹಣಕಾಸು ಇಲಾಖೆಗೆ ನೀಡುವಲ್ಲಿ ಡಿಡಿಪಿಒಗಳು ವಿಳಂಬ ನೀತಿ ಅನುಸರಿಸಿರುವುದು ಮತ್ತು ನಿಖರ ಮಾಹಿತಿ ನೀಡದಿರುವ ಕಾರಣ ಸಮಸ್ಯೆಯಾಗಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ನಿಗದಿತ ಸಮಯದಲ್ಲಿ ನಿಖರ ಮಾಹಿತಿ ನೀಡಲಾಗಿದೆ. ಖಜಾನೆ ತಂತ್ರಾಂಶ-2ರ ಮೂಲಕ ಆರ್ಥಿಕ ಇಲಾಖೆ ಹಣ ಮಂಜೂರು ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.

ಎಲ್ಲೆಲ್ಲಿ ಸಮಸ್ಯೆ?

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ವೇತನ ಅನುದಾನ ಅದಲು ಬದಲಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕೊಪ್ಪ, ಧಾರವಾಡ ಮತ್ತು ಹುಬ್ಬಳ್ಳಿ, ಹಾಸನದ ಆಲೂರು, ಅರಕಲಗೂಡು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ, ಸಕಲೇಶಪುರ ತಾಲೂಕುಗಳಿಗೆ ಹಂಚಿಕೆಯಾದ ಅನುದಾನದಲ್ಲಿ ವ್ಯತ್ಯಾಸ ಉಂಟಾಗಿದೆ.

ಮೌನ ಪ್ರತಿಭಟನೆಗೆ ಸಿದ್ಧರಾದ ಶಿಕ್ಷಕರು

ಬುಧವಾರ ಶಿಕ್ಷಕರ ದಿನಾಚರಣೆ ಸಂದರ್ಭ ವೇತನ ಬಾರದ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರು ತಾಲೂಕು ಮಟ್ಟಗಳಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವೇಳೆ ಮೌನ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ. ನಾವು ಘೋಷಣೆಗಳನ್ನು ಕೂಗುವುದಿಲ್ಲ. ದಿನಾಚರಣೆ ನಡೆಯುವ ಕಾರ್ಯಕ್ರಮದಿಂದ ಹೊರಗೆ ನಿಲ್ಲುತ್ತೇವೆ. ಊಟ-ತಿಂಡಿಯನ್ನೂ ಸ್ವೀಕರಿಸದೆ ಸಾತ್ವಿಕವಾಗಿ ಪ್ರತಿಭಟಿಸುತ್ತೇವೆ ಎಂದಿದ್ದಾರೆ.

ಸಂದೀಪ್‌ ವಾಗ್ಲೆ

Follow Us:
Download App:
  • android
  • ios