Asianet Suvarna News Asianet Suvarna News

ಪೊಲೀಸರಿಗೆ ರಕ್ಷಣೆ ಇಲ್ಲವೆಂದು ಐಪಿಎಸ್ ಪತ್ರ

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಧಿಕಾರಿಗಳ ಮೇಲಿನ ಹಲ್ಲೆ, ಪದೇಪದೇ ವರ್ಗಾವಣೆ ಸೇರಿದಂತೆ ಹಲವು ಘಟನೆಗಳ ಬಗ್ಗೆ ಐಪಿಎಸ್ ಅಧಿಕಾರಿಗಳ ಸಂಘ ತೀವ್ರ ಅಸಮಾಧಾನ ಹೊರಹಾಕಿದೆ. ಈ ಸಂಬಂಧ ಸಂಘದ ಅಧ್ಯಕ್ಷರೂ ಆಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಾ.ರಾಜ್‌ವೀರ್ ಪ್ರತಾಪ್ ಶರ್ಮಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ.

No protection Of Police IPS Officer Letter To Govt

ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಧಿಕಾರಿಗಳ ಮೇಲಿನ ಹಲ್ಲೆ, ಪದೇಪದೇ ವರ್ಗಾವಣೆ ಸೇರಿದಂತೆ ಹಲವು ಘಟನೆಗಳ ಬಗ್ಗೆ ಐಪಿಎಸ್ ಅಧಿಕಾರಿಗಳ ಸಂಘ ತೀವ್ರ ಅಸಮಾಧಾನ ಹೊರಹಾಕಿದೆ. ಈ ಸಂಬಂಧ ಸಂಘದ ಅಧ್ಯಕ್ಷರೂ ಆಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಾ.ರಾಜ್‌ವೀರ್ ಪ್ರತಾಪ್ ಶರ್ಮಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ.

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಮೇಲಿನ ಹಲ್ಲೆ, ಯು.ಬಿ. ಸಿಟಿಯಲ್ಲಿ ಉದ್ಯಮಿಯ ಪುತ್ರ ವಿದ್ವತ್ ಎಂಬುವರ ಮೇಲೆ ನಡೆದ ಹಲ್ಲೆ, ಕಾಂಗ್ರೆಸ್ ಕಾರ್ಯಕರ್ತ ನಾರಾಯಣಸ್ವಾಮಿ ದಾಂಧಲೆ, ಐಎಎಸ್ ಅಧಿಕಾರಿ ರಶ್ಮಿ ಅವರ ಮೇಲೆ ಮೈಸೂರಿನಲ್ಲಿ ನಡೆದ ಹಲ್ಲೆ, ಕಾವೇರಿ ತೀರ್ಪು ವೇಳೆ ರಾಜ್ಯದಲ್ಲಿ ನಡೆದ ಗಲಾಟೆ ಬಗ್ಗೆ ಪತ್ರದಲ್ಲಿ ಪ್ರಸ್ತಾಪಿಸಿರುವ ಅವರು, ಇಂಥ ಘಟನೆಗಳು ಪೊಲೀಸ್ ವೃತ್ತಿ ಮತ್ತು ಘನತೆಯನ್ನು ದುರ್ಬಲಗೊಳಿಸಿವೆ.

ಪ್ರಬಲವಾದ ಮತ್ತು ವೃತ್ತಿಪರ ಪೊಲೀಸ್ ವ್ಯವಸ್ಥೆ ಇದ್ದಿದ್ದರೆ ಇಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ. ಸಾಮಾನ್ಯ ಜನತೆ ತಮಗೆ ತೊಂದರೆಯಾದರೆ ಐಎಎಸ್, ಲೋಕಾಯುಕ್ತ, ಪೊಲೀಸ್ ಇವರ ಬಳಿ ರಕ್ಷಣೆ ಕೋರಿ ಬರುತ್ತಾರೆ. ವಿಪರ್ಯಾಸವೆಂದರೆ ಪ್ರಸ್ತುತ ದಿನಗಳಲ್ಲಿ ಇವರಿಗೇ ರಕ್ಷಣೆ ಇಲ್ಲದಂತಾಗಿದೆ. ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಬೇಕಾದರೆ ಸೂಕ್ತವಾಗಿ ನಾಯಕತ್ವ ಇರಬೇಕು. ಐಪಿಎಸ್ ಅಧಿಕಾರಿಗಳೇ ತಮ್ಮ ಕರ್ತವ್ಯ ಲೋಪದಿಂದಾಗಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.

ರಾಜಕಾರಣಿಗಳ ಪ್ರಭಾವದಿಂದಾಗಿ ಪ್ರಮುಖ ಪ್ರಕರಣಗಳ ತನಿಖೆ ಹಳ್ಳ ಹಿಡಿಯುತ್ತಿದ್ದು, ಕಾನೂನಿನ ಮೇಲೆ ಭಯ ಇಲ್ಲದಂತಾಗಿದೆ. ರಾಜಕೀಯ ಹಸ್ತಕ್ಷೇಪ ದಿಂದ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿರುವ ಸಂಸ್ಥೆಗಳ ಘನತೆಯೂ ಕ್ಷೀಣಿಸುತ್ತದೆ. ಹೀಗಾಗಿ ಭಾರತೀಯ ಪೊಲೀಸ್ ಸೇವೆ ದೇಶದಲ್ಲಿ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಕಾರಣಗಳಿಂದಾಗಿ ನಮ್ಮ ಮುಂದಿರುವ ಗುರಿ ಎಂದರೆ ಮುಕ್ತವಾದ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸುವುದು. ಬಳಿಕ ದೂರಗಾಮಿಯಾಗಿ ವೃತ್ತಿಪರ ಮೌಲ್ಯವನ್ನೂ ವೃದ್ಧಿಸುವ ಗುರಿ ಇಟ್ಟುಕೊಳ್ಳಬೇಕಾಗಿದೆ.

ಈ ಮೂಲಕ ಐಪಿಎಸ್ ಅಸೋಸಿಯೇಷನ್‌ನ ಎಲ್ಲಾ ಪದಾಧಿಕಾರಿಗಳೂ ತಕ್ಷಣ ಸಭೆ ಸೇರುವ ಅಗತ್ಯವಿದೆ ಎಂದು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios