Asianet Suvarna News Asianet Suvarna News

ಅಮಿತ್ ಶಾ ಬಂಧನಕ್ಕೆ ಕಾರಣವಾಗಿದ್ದ ಸೊಹ್ರಾಬುದ್ದೀನ್ ಕೇಸ್: ಆರೋಪಿಗಳು ಖುಲಾಸೆ!

ಸೊಹ್ರಾಬುದ್ದೀನ್‌ ಕೇಸಲ್ಲಿ ಯಾರಿಗೂ ಶಿಕ್ಷೆ ಇಲ್ಲ| 21 ಪೊಲೀಸರೂ ಸೇರಿ 22 ಆರೋಪಿಗಳ ಖುಲಾಸೆ| ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು| ತೀರ್ಪಿನ ವಿರುದ್ಧ ಮೇಲ್ಮನವಿ: ಸೊಹ್ರಾಬ್‌ ಸೋದರ

No Proof Of Fake Encounter In Sohrabuddin Case Says Court
Author
New Delhi, First Published Dec 22, 2018, 11:19 AM IST

ಮುಂಬೈ[ಡಿ.22]: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಂಧನಕ್ಕೆ ಕಾರಣವಾಗಿದ್ದ ಪಾತಕಿ ಸೊಹ್ರಾಬುದ್ದೀನ್‌ ಶೇಖ್‌, ಆತನ ಪತ್ನಿ ಕೌಸರ್‌ ಬೀ ಹಾಗೂ ಆಪ್ತ ತುಳಸಿ ಪ್ರಜಾಪತಿ ಎನ್‌ಕೌಂಟರ್‌ ಪ್ರಕರಣದಿಂದ ಎಲ್ಲ 22 ಆರೋಪಿಗಳನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ದೋಷಮುಕ್ತಗೊಂಡವರಲ್ಲಿ 21 ಪೊಲೀಸ್‌ ಅಧಿಕಾರಿಗಳೂ ಇದ್ದಾರೆ. ಸಾಕ್ಷ್ಯಾಧಾರ ಕೊರತೆಯ ಕಾರಣಕ್ಕೆ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದಿರುವ ನ್ಯಾಯಾಲಯ, ಮೂವರ ಸಾವಿಗೆ ದುಃಖವನ್ನು ವ್ಯಕ್ತಪಡಿಸಿದೆ.

ಆದರೆ ಈ ತೀರ್ಪಿನ ಬಗ್ಗೆ ಸೊಹ್ರಾಬುದ್ದೀನ್‌ ಸೋದರ ರುಬಾಬುದ್ದೀನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಅಮಿತ್‌ ಶಾ, ಗುಜರಾತಿನ ಐಪಿಎಸ್‌ ಅಧಿಕಾರಿ ವಂಜಾರ, ಕೋಲಾರ ಮೂಲದ ರಾಜಸ್ಥಾನ ಐಪಿಎಸ್‌ ಅಧಿಕಾರಿ ದಿನೇಶ್‌ ಕೂಡ ಈ ಹಿಂದೆ ಆರೋಪಿಗಳಾಗಿದ್ದರು. ಆದರೆ ವಿಚಾರಣೆ ಹಂತದಲ್ಲೇ ಖುಲಾಸೆಯಾಗಿದ್ದರು.

ನ್ಯಾಯಾಲಯಗಳು ಸಾಕ್ಷ್ಯಾಧಾರ ಆಧರಿಸಿ ಪ್ರಕರಣ ಇತ್ಯರ್ಥಗೊಳಿಸಬೇಕು ಎಂದು ವ್ಯವಸ್ಥೆ ಹೇಳುತ್ತದೆ. ಮೂವರ ಹತ್ಯೆ ಹಿಂದೆ ಸಂಚು ಇತ್ತು ಅಥವಾ ಆರೋಪಿಗಳ ಪಾತ್ರವಿತ್ತು ಎಂಬುದನ್ನು ನಿರೂಪಿಸಲು ಸರ್ಕಾರಿ ಅಭಿಯೋಜಕರು ವಿಫಲರಾಗಿದ್ದಾರೆ ಎಂದು ಸಿಬಿಐ ನ್ಯಾಯಾಧೀಶ ಎಸ್‌.ಜೆ. ಶರ್ಮಾ ತೀರ್ಪು ನೀಡಿದರು.

ಏನಿದು ಪ್ರಕರಣ?:

ಲಷ್ಕರ್‌ ಎ ತೊಯ್ಬಾ ಜತೆ ನಂಟು ಹೊಂದಿದ್ದಾರೆ, ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಕಾರಣ ನೀಡಿ ಸೊಹ್ರಾಬುದ್ದೀನ್‌, ಕೌಸರ್‌ ಬೀ ಹಾಗೂ ತುಳಸಿ ಪ್ರಜಾಪತಿಯನ್ನು 2005ರ ನ.22-23ರ ರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ನ.26ರಂದು ಸೊಹ್ರಾಬುದ್ದೀನ್‌ ಶೇಖ್‌, ಮೂರು ದಿನಗಳ ಬಳಿಕ ಆತನ ಪತ್ನಿ, 2006ರ ಡಿ.27ರಂದು ತುಳಸಿ ಪ್ರಜಾಪತಿಯನ್ನು ಎನ್‌ಕೌಂಟರ್‌ ನಡೆಸಿದ್ದರು. ಆದರೆ ಇವು ನಕಲಿ ಎನ್‌ಕೌಂಟರ್‌ಗಳು ಎಂಬ ಆಪಾದನೆ ಕೇಳಿಬಂದಿತ್ತು. ಆರಂಭದಲ್ಲಿ ಗುಜರಾತಿನ ಸಿಐಡಿ ಈ ಬಗ್ಗೆ ತನಿಖೆ ನಡೆಸಿತ್ತು. 2010ರಲ್ಲಿ ಪ್ರಕರಣ ಸಿಬಿಐಗೆ ಹಸ್ತಾಂತರಗೊಂಡಿತ್ತು. ಎನ್‌ಕೌಂಟರ್‌ ನಡೆದಾಗ ಅಮಿತ್‌ ಶಾ ಅವರು ಗುಜರಾತಿನ ಗೃಹ ಸಚಿವರಾಗಿದ್ದ ಕಾರಣಕ್ಕೆ ಅವರ ಬಂಧನವೂ ಆಗಿತ್ತು. ವಂಜಾರಾ ಹಾಗೂ ದಿನೇಶ್‌ ಅವರನ್ನು ಕೂಡ ಬಂಧಿಸಲಾಗಿತ್ತು. 2015ರಲ್ಲಿ ಅಮಿತ್‌ ಶಾ ಅವರು ಪ್ರಕರಣದಿಂದ ಖುಲಾಸೆಗೊಂಡಿದ್ದರು. 13 ವರ್ಷಗಳ ಅವಧಿಯಲ್ಲಿ ಹಲವು ತಿರುವುಗಳನ್ನು ಪಡೆದಿತ್ತು. ವಿಚಾರಣೆ ಗುಜರಾತಿನಿಂದ ಮುಂಬೈಗೆ ಸ್ಥಳಾಂತರಗೊಂಡಿತ್ತು. ಪ್ರಕರಣದಲ್ಲಿ ಕೊನೆಗೆ 22 ಮಂದಿ ಆರೋಪಿಗಳಾಗಿ ಉಳಿದಿದ್ದರು. ಈಗ ಆ ಎಲ್ಲರೂ ಖುಲಾಸೆಗೊಂಡಿದ್ದಾರೆ.

Follow Us:
Download App:
  • android
  • ios