Asianet Suvarna News Asianet Suvarna News

ರಾಜ್ಯದ 21 ಜೈಲುಗಳು ಬಂದ್

ರಾಜ್ಯದಲ್ಲಿರುವ 21 ಜೈಲುಗಳು ಬಂದ್ ಮಾಡಲಾಗಿದೆ. ಜೈಲುಗಳನ್ನು ಬಂದ್ ಮಾಡಲು ಕಾರಣವೇನು..?

No Prisons Karnataka 21 Taluk Jails Shut Down
Author
Bengaluru, First Published May 26, 2019, 8:34 AM IST

ಬೆಂಗಳೂರು :  ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದ 21 ತಾಲೂಕು ಕಾರಾಗೃಹಗಳು ಕೈದಿಗಳ ಕೊರತೆಯಿಂದ ಬಾಗಿಲು ಮುಚ್ಚಿವೆ.

ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ಕೇಂದ್ರ ಮತ್ತು ಜಿಲ್ಲಾ ಕಾರಾಗೃಹಗಳಲ್ಲಿ ಕೈದಿಗಳು ತುಂಬಿ ತುಳುಕಾಡುತ್ತಿದ್ದರೆ, ಅತ್ತ ತಾಲೂಕು ಕಾರಾಗೃಹಗಳಲ್ಲಿ ಕೈದಿಗಳ ಬರ ಪರಿಸ್ಥಿತಿ ಉಂಟಾಗಿದೆ. ಈ ಬೆಳವಣಿಗೆಯು ನಾಡಿನ ಹಳ್ಳಿಗಾಡುಗಳು ಅಪರಾಧಮುಕ್ತವಾಗುವ ಕಡೆಗೆ ಹೆಜ್ಜೆ ಹಾಕುತ್ತಿದೆಯೇ ಎಂಬ ಆಶಾದಾಯಕ ಭಾವನೆ ಮೂಡಿಸುತ್ತಿದೆ.

ಇತ್ತೀಚೆಗೆ ಕಾರಾಗೃಹಗಳಲ್ಲಿ ಸಜಾ ಬಂಧಿಗಳ ಮನಃಪರಿವರ್ತನೆಯ ಪರಿಣಾಮ ಪಕ್ಕದ ತೆಲಂಗಾಣ ರಾಜ್ಯದಲ್ಲಿ 17 ಜೈಲುಗಳು ಬಂದ್‌ ಆಗಿವೆ. ಆ ಬಗ್ಗೆ ಸಾಮಾಜಿಕ ಜಾಲ ತಾಣ ಹಾಗೂ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಅದೇ ರೀತಿ ಕರ್ನಾಟಕದಲ್ಲೂ ಕೂಡ ಕೈದಿಗಳ ಮನಃಪರಿವರ್ತನೆ ಹಾಗೂ ಅಪರಾಧ ನಿಯಂತ್ರಣದ ಯೋಜನೆಗಳು ಫಲ ನೀಡುತ್ತಿವೆ ಎಂಬ ಲಕ್ಷಣಗಳು ಗೋಚರಿಸುತ್ತಿವೆ.

ಎರಡು ವರ್ಷಗಳ ಅವಧಿಯಲ್ಲಿ ಕೈದಿಗಳ ಕೊರತೆ ಹಿನ್ನೆಲೆಯಲ್ಲಿ 21 ತಾಲೂಕು ಮಟ್ಟದ ಜೈಲುಗಳನ್ನು ಮುಚ್ಚಿದ ರಾಜ್ಯ ಬಂದೀಖಾನೆ ಇಲಾಖೆ, ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಕಾರಾಗೃಹಗಳಿಗೆ ನಿಯೋಜಿಸಿದೆ. ಆದರೆ, ಇದಕ್ಕೆ ತದ್ವಿರುದ್ಧವೆಂಬಂತೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಹೊಸ ಸೆಂಟ್ರಲ್‌ ಜೈಲ್‌ಗಳ ಸ್ಥಾಪನೆಗೆ ಇಲಾಖೆ ಯೋಜಿಸಿದೆ.

ಬೆಂಗಳೂರಲ್ಲಿ ನಿತ್ಯ 20 ಜನ ಜೈಲಿಗೆ:

ರಾಜ್ಯದಲ್ಲಿ ಮಹಿಳಾ ಕಾರಾಗೃಹ, 8 ಸೆಂಟ್ರಲ್‌ ಜೈಲುಗಳು, 21 ಜಿಲ್ಲಾ ಕಾರಾಗೃಹಗಳು, 28 ತಾಲೂಕು ಕಾರಾಗೃಹಗಳು, 1 ಬಯಲು ಬಂದೀಖಾನೆ ಹಾಗೂ 44 ಕಂದಾಯ ಜೈಲುಗಳಿವೆ. ಇವುಗಳಲ್ಲಿ 13,688 ಕೈದಿಗಳನ್ನು ಕೂಡಿಹಾಕುವ ಸಾಮರ್ಥ್ಯವಿದ್ದು, ಪ್ರಸ್ತುತ ಎಲ್ಲಾ ಕಾರಾಗೃಹಗಳಲ್ಲಿ ವಿಚಾರಣಾಧೀನ ಕೈದಿಗಳು ಸೇರಿದಂತೆ ಒಟ್ಟು 14,974 ಕೈದಿಗಳು ಬಂಧನದಲ್ಲಿದ್ದಾರೆ.

ಈ ಪೈಕಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅತಿ ಹೆಚ್ಚು ಕೈದಿಗಳನ್ನು ಹೊಂದಿದ್ದು, ಅಲ್ಲಿ 5187 ಕೈದಿಗಳಿದ್ದಾರೆ. ಪ್ರತಿ ದಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ಸರಾಸರಿ 10ರಿಂದ 20 ಜನರು ಪರಪ್ಪನ ಜೈಲಿಗೆ ಪ್ರವೇಶ ಪಡೆಯುತ್ತಿದ್ದಾರೆ. ಹೊರ ಹೋಗುವವರ ಸಂಖ್ಯೆ ಅದಕ್ಕಿಂತ ಕಡಿಮೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿ ತಾಲೂಕು ಮಟ್ಟದ ಕಾರಾಗೃಹಗಳಲ್ಲಿ 25ರಿಂದ 30 ಕೈದಿಗಳನ್ನು ಬಂಧಿಸಿಡಬಹುದು. ಆ ಕೈದಿಗಳ ಉಸ್ತುವಾರಿಗೆ ಜೈಲರ್‌ ಸೇರಿದಂತೆ 8 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲ ವರ್ಷಗಳಿಂದ ಅನೇಕ ತಾಲೂಕು ಮಟ್ಟದ ಕಾರಾಗೃಹಗಳಲ್ಲಿ ಕೈದಿಗಳ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕು ಕಾರಾಗೃಹದ ಸ್ಥಿತಿಗತಿ ಅವಲೋಕಿಸಿದ ಇಲಾಖೆ, ಕೊನೆಗೆ ಕೈದಿಗಳ ಬರ ಉಂಟಾಗಿದ್ದ ಕಾರಾಗೃಹಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿತು ಎಂದು ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಈ ಕಾರಾಗೃಹಗಳಲ್ಲಿ ಕೈದಿಗಳ ಅಭಾವಕ್ಕೆ ನಿಖರ ಕಾರಣ ಗೊತ್ತಾಗುತ್ತಿಲ್ಲ. ಈ ಬಗ್ಗೆ ಅಧ್ಯಯನ ಸಹ ನಡೆಸಲಾಗುತ್ತಿದೆ. ಇದರಲ್ಲಿ ಅಪರಾಧ ಕೃತ್ಯಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಸಹ ಒಂದಾಗಿರಬಹುದು. ಇನ್ನು ತೆಲಂಗಾಣ ರಾಜ್ಯಕ್ಕೂ ನಮ್ಮ ರಾಜ್ಯದ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಕಂದಾಯ ಇಲಾಖೆಯಿಂದ ಬಂದೀಖಾನೆ ಇಲಾಖೆಗೆ:

ಅಧಿಕಾರಿಗಳ ಕೊರತೆ ಸಮಸ್ಯೆ ಹಿನ್ನೆಲೆಯಲ್ಲಿ ರಾಜ್ಯದ ತಾಲೂಕು ಕಾರಾಗೃಹಗಳ ಆಡಳಿತವನ್ನು ಆಯಾ ತಾಲೂಕು ಆಡಳಿತಗಳು ನಿರ್ವಹಿಸುತ್ತಿದ್ದವು. ಆದರೆ ಈಗ ಕಾರಾಗೃಹ ಇಲಾಖೆಗೆ ಹೊಸದಾಗಿ 900 ಅಧಿಕಾರಿಗಳು ನೇಮಕವಾಗಿದ್ದಾರೆ. ಹೀಗಾಗಿ ಶೀಘ್ರದಲ್ಲೇ ತಾಲೂಕು ಕಾರಾಗೃಹಗಳನ್ನು ಇಲಾಖೆಯ ಸುಪರ್ದಿಗೆ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲು ಮುಚ್ಚುವುದಕ್ಕೆ ಶಾಸಕರ ವಿರೋಧ

ಕೈದಿಗಳ ದಾಖಲಾತಿ ಕಡಿಮೆಯಾದ ಕಾರಣಕ್ಕೆ ತಾಲೂಕು ಕಾರಾಗೃಹದ ಬಾಗಿಲು ಬಂದ್‌ ಮಾಡುವ ಬಂದೀಖಾನೆ ಇಲಾಖೆಯ ನಿರ್ಧಾರಕ್ಕೆ ಕೆಲವು ಚುನಾಯಿತ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ತಮ್ಮ ತಾಲೂಕಿನಲ್ಲಿ ಜೈಲಿರಬೇಕೆಂದು ಅವರು ವಾದಿಸುತ್ತಿದ್ದು, ಇಲಾಖೆಯ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಈ ಒತ್ತಡಕ್ಕೆ ಮಣಿಯದೆ ಆಡಳಿತಾತ್ಮಕ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವರದಿ :  ಗಿರೀಶ್‌ ಮಾದೇನಹಳ್ಳಿ

Follow Us:
Download App:
  • android
  • ios