ಚೆನ್ನೈ[ಆ.24]: ತಮಿಳುನಾಡಿನ ಮಧುರೈನ ವೃದ್ಧೆಯೊಬ್ಬಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇದು ನೋಡುಗರನ್ನು ಭಾವುರನ್ನಾಗಿಸುತ್ತಿದೆ. ಇಲ್ಲಿ 65 ವರ್ಷದ ವೃದ್ಧ ಮಹಿಳೆ ಕಳೆದ 19 ವರ್ಷಗಳಿಂದ ಶೌಚಾಲಯದಲ್ಲೇ ವಾಸಿಸುತ್ತಿದ್ದಾರೆ. 

ನ್ಯೂಸ್ ಏಜೆನ್ಸಿ ANI ಅನ್ವಯ ಕುರುಪಾಯಿ ಹೆಸರಿನ ಮಹಿಳೆ ಕಳೆದ 19 ವರ್ಷಗಳಿಂದ ತಮಿಳುನಾಡಿನ ಮಧುರೈನ ರಾಮ್ನದ್ ಇಲಾಖೆಯ ಸಾರ್ವಜನಿಕ ಶೌಚಾಲಯದಲ್ಲಿ ವಾಸಿಸುತ್ತಿದ್ದಾರೆ. ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡುವ ಈ ಮಹಿಳೆ ಪ್ರತಿದಿನ 70 ರಿಂದ 80 ರೂಪಾಯಿ ಸಂಪಾದಿಸುತ್ತಾಳೆ.

’ಹಿರಿಯ ನಾಗರಿಕ ಪಿಂಚಣಿಗಾಗಿ ನಾನು ಅರ್ಜಿ ಸಲ್ಲಿಸಿದ್ದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಹಲವಾರು ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಆದರೆ ಏನೂ ಪ್ರಯೋಜನವಾಗಿಲ್ಲ' ಎಮದು ಕುರುಪಾಯಿ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.

ಬೇರೆ ಯಾವುದೇ ಆದಾಯ ಮೂಲವಿಲ್ಲದ ಕಾರಣ ಕುರುಪಾಯಿ ಶೌಚಾಲಯ ಸ್ವಚ್ಛ ಮಾಡುವ ಕೆಲಸ ಮಾಡುತ್ತಾರೆ. 'ನನಗೆ ಆದಾಯ ಗಳಿಸಲು ಬೇರೆ ಯಾವುದೇ ದಾರಿ ಇಲ್ಲ. ಹೀಗಾಗಿ ಶೌಚಾಲಯ ಸ್ವಚ್ಛ ಮಾಡುತ್ತೇನೆ.ಪ್ರತಿ ದಿನ 70 ರಿಂದ 80 ರೂಪಾಯಿ ಗಳಿಸುತ್ತೇನೆ. ನನಗೊಬ್ಬ ಮಗಳಿದ್ದಾಳೆ. ಆದರೆ ಆಕೆ ಒಂದು ದಿನವೂ ನನ್ನನ್ನು ಭೇಟಿಯಾಗಲು ಬರುವುದಿಲ್ಲ' ಎನ್ನುವುದು ಕುರುಪಾಯಿ ಅಳಲು.

ಕುರುಪಾಯಿ ಪರಿಸ್ಥಿತಿ ಬಹಿರಂಗವಾಗುತ್ತಿದ್ದಂತೆಯೇ ಹಲವಾರು ಮಂದಿ ಆಕೆಗೆ ಸಹಾಯ ಮಾಡಲು ಮುಂದಾಗಿದ್ದಾರೆ.