50,000 ರು. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್‌ಕಾರ್ಡ್ ಕಡ್ಡಾಯಗೊಳಿಸಿದ್ದ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಹೀಗಾಗಿ ಇನ್ನು ಮುಂದೆ 2 ಲಕ್ಷ ರು. ವರೆಗಿನ ಚಿನ್ನಾಭರಣ ಖರೀದಿಗೆ ಪಾನ್‌ಕಾರ್ಡ್ ಕಡ್ಡಾಯ ಇರುವುದಿಲ್ಲ. ಅದಕ್ಕೆ ಮೇಲ್ಪಟ್ಟ ಮೊತ್ತದ ಖರೀದಿಗೆ ಮಾತ್ರವೇ ಪಾನ್ ಸೇರಿದಂತೆ ಸರ್ಕಾರ ನಿಗದಿಪಡಿಸಿರುವ ಯಾವುದಾದರೂ ಗುರುತಿನ ಚೀಟಿ ಕಡ್ಡಾಯವಾಗಿರಲಿದೆ.
ನವದೆಹಲಿ: 50,000 ರು. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್ಕಾರ್ಡ್ ಕಡ್ಡಾಯಗೊಳಿಸಿದ್ದ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಹೀಗಾಗಿ ಇನ್ನು ಮುಂದೆ 2 ಲಕ್ಷ ರು. ವರೆಗಿನ ಚಿನ್ನಾಭರಣ ಖರೀದಿಗೆ ಪಾನ್ಕಾರ್ಡ್ ಕಡ್ಡಾಯ ಇರುವುದಿಲ್ಲ. ಅದಕ್ಕೆ ಮೇಲ್ಪಟ್ಟ ಮೊತ್ತದ ಖರೀದಿಗೆ ಮಾತ್ರವೇ ಪಾನ್ ಸೇರಿದಂತೆ ಸರ್ಕಾರ ನಿಗದಿಪಡಿಸಿರುವ ಯಾವುದಾದರೂ ಗುರುತಿನ ಚೀಟಿ ಕಡ್ಡಾಯವಾಗಿರಲಿದೆ.
ಅಪನಗದೀಕರಣದ ಬಳಿಕ ಆಭರಣ ಉದ್ಯಮಿಗಳು, ಅಕ್ರಮ ಹಣ ಸಕ್ರಮ ಮಾಡುವ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಸಂಶಯ ಕೇಂದ್ರ ಸರ್ಕಾರವನ್ನು ಕಾಡಿತ್ತು. ಹೀಗಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ- 2002 ಅನ್ನು ಆಭರಣ ಖರೀದಿ ವ್ಯವಹಾರಗಳಿಗೆ ವಿಸ್ತರಿಸಿತ್ತು. ಪರಿಣಾಮ ₹50000 ಮೇಲ್ಪಟ್ಟ ಚಿನ್ನಖರೀದಿ ವೇಳೆ ಗ್ರಾಹಕರು ಪಾನ್ಕಾರ್ಡ್ ವಿವರ ನೀಡಬೇಕಿತ್ತು. ಜೊತೆಗೆ ವರ್ತಕರು, ಭಾರೀ ಮೌಲ್ಯದ ಖರೀದಿ ಬಗ್ಗೆ ದಾಖಲೆ ಇಟ್ಟುಕೊಳ್ಳುವುದರ ಜತೆಗೆ ಅದನ್ನು ಹಣಕಾಸು ಗುಪ್ತ ಚರ ಇಲಾಖೆಗೆ ಸಲ್ಲಿಸಬೇಕಿತ್ತು.
ಆದರೆ ಇದೀಗ ಎರಡೂ ನಿಯಮಗಳನ್ನು ಸರ್ಕಾರ ರದ್ದುಪಡಿಸಿದೆ. ಶಂಕಿತ ಹಣ ವರ್ಗಾವಣೆ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆ.23ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ನು ಚಿನ್ನಾಭರಣಗಳ ಮಾರಾಟಕ್ಕೂ ವಿಸ್ತರಿಸಿತ್ತು.
ಆದರೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ನು ಚಿನ್ನಾಭರಣಗಳ ಖರೀದಿಗೆ ವಿಸ್ತರಿಸಿದ್ದರಿಂದ ಕಾನೂನು ಬದ್ಧವಾಗಿ ನಡೆಯುವ ಚಿನ್ನಾಭರಣಗಳ ಮಾರಾಟ ಇಳಿಕೆಯಾಗಲಿದೆ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಿಂದ ವಿನಾಯಿತಿ ಕೊಟ್ಟಿದ್ದರೂ, ತೆರಿಗೆ ಕಾಯ್ದೆಯ ಪ್ರಕಾರ ಕೆವೈಸಿ ಇಲ್ಲದೇ 2 ಲಕ್ಷಗಳ ವರೆಗೆ ಚಿನ್ನ ಮಾರಾಟಕ್ಕೆ ಅವಕಾಶ ಇದೆ. ಹೀಗಾಗಿ 2 ಲಕ್ಷ ರು. ಮೇಲ್ಪಟ್ಟ ಖರೀದಿಗೆ ಪಾನ್, ಆಧಾರ್ ನಂಬರ್, ಡಿಎಲ್ ಇಲ್ಲ ಪಾಸ್ಪೋರ್ಟ್ ಪ್ರತಿ ನೀಡುವುದು ಕಡ್ಡಾಯ.
