ನವದೆಹಲಿ/ಹೈದರಾಬಾದ್(ಆ.17): ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೂ, ಆತನ ವಿರುದ್ಧ ವಿಶ್ವವಿದ್ಯಾಲಯ ಜರುಗಿಸಿದ ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ರೋಹಿತ್ ಬಾಧಿತ ವ್ಯಕ್ತಿ ಯಾಗಿದ್ದ. ತನ್ನ ಸುತ್ತಲಿನ ಚಟಿವಟಿಕೆಗಳಿಂದ ಅಸಂತೋಷಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನೇಮಿಸಿದ ಏಕವ್ಯಕ್ತಿ ತನಿಖಾ ಆಯೋಗ ಹೇಳಿದೆ.

ಅಲ್ಲದೆ, ರೋಹಿತ್ ವೇಮುಲ ದಲಿತ ಅಲ್ಲ. ಅವರ ತಾಯಿ ವಡ್ಡ ಸಮುದಾಯಕ್ಕೆ ಸೇರಿದ್ದು, ಇದು ಪರಿಶಿಷ್ಟ ಜಾತಿ ಅಲ್ಲ. ಹೀಗಾಗಿ ರೋಹಿತ್‌ಗೆ ನೀಡಲಾಗಿದ್ದ ಜಾತಿ ಪ್ರಮಾಣಪತ್ರ ತಪ್ಪು ಎಂದು ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾ| ಎ.ಕೆ. ರೂಪನ್‌ವಾಲ್ ಅವರಿದ್ದ ಆಯೋಗ ತಿಳಿಸಿದೆ.

ಎಬಿವಿಪಿ ಕಾರ್ಯಕರ್ತ ರೊಂದಿಗೆ ಕಾದಾಡಿದ ಕಾರಣ ರೋಹಿತ್‌ನನ್ನು ವಿವಿಯಿಂದ ಹಾಗೂ ಹಾಸ್ಟೆ ಲ್‌ನಿಂದ ಅಮಾನತು ಮಾಡಲಾಗಿತ್ತು. ಬಳಿಕ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೆ ರಾಜಕೀಯ ಒತ್ತಡವೇ ಕಾರಣ ಎಂದು ದೂರಲಾಗಿತ್ತು. ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ, ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು ವೇಮುಲ ಅವರನ್ನು ವಿವಿಯಿಂದ ಅಮಾನತು ಮಾಡುವಂತೆ ಕುಲಪತಿಗೆ ಮಾಡಿದ ಶಿಫಾರಸುಗಳಿಂದ ನೊಂದು ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರಲಾಗಿತ್ತು. ಬಳಿಕ ಇದರ ತನಿಖೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅಯೋಗ ರಚಿಸಿತ್ತು.

ಈಗ ವರದಿ ನೀಡಿರುವ ಆಯೋಗ, ‘ರೋಹಿತ್ ಸಾವಿಗೆ ಸ್ಮತಿ, ಬಂಡಾರು ಹಾಗೂ ವಿವಿ ಕುಲಪತಿಗಳ ಆದೇಶಗಳು ಕಾರಣವಲ್ಲ. ಸ್ಮತಿ ಹಾಗೂ ಬಂಡಾರು ಅವರು ತಮಗೆ ರೋಹಿತ್ ವಿರುದ್ಧ ಬಂದ ದೂರು ಪರಿಶೀಲಿಸುವಂತೆ ಇಲಾಖೆಗಳಿಗೆ ರವಾನಿಸಿದ್ದರು. ಅವರು ಜನಪ್ರತಿನಿಧಿಯಾಗಿ ಮಾಡುವ ಕಾರ್ಯ ಮಾಡಿದ್ದಾರಷ್ಟೇ. ‘ರೋಹಿತ್ ತನ್ನ ಸುತ್ತ ನಡೆಯುತ್ತಿರುವ ಚಟುವಟಿಕೆಗಳಿಂದ ಅಸಂತೋಷಗೊಂಡಿದ್ದ ಎಂದು ಆಯೋಗ ಹೇಳಿದೆ.