ಒಂದು ಕಾಲಕ್ಕೆ ಚಿನ್ನದ ಬೀಡು, ಬಂಗಾರ ಬೆಳೆವ ನಾಡು ಎಂತಲೇ ಕರೆಸಿಕೊಂಡಿದ್ದ ಕೆಜಿಎಫ್'ನಲ್ಲಿ ಈಗ ದಾರಿದ್ರ್ಯತೆ ತಾಂಡವವಾಡುತ್ತಿದೆ. ಜನಪ್ರತಿನಿಧಿಗಳ ಹಾಗೂ ಕಾರ್ಮಿಕ ಸಂಘಟನೆಗಳ ಕಿತ್ತಾಟ, ಕಿತ್ತು ತಿನ್ನುವ ಬಡತನದಿಂದ ಸಾವಿರಾರು ಗಣಿ ಕಾರ್ಮಿಕರು ಜೀವನ ಸಾಗಿಸಲಾಗದೇ ಚಿಕಿತ್ಸೆಯೂ ಇಲ್ಲದೇ ಕಣ್ಮರೆಯಾಗುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ
ಕೋಲಾರ(ಜ.30): ಒಂದು ಕಾಲಕ್ಕೆ ಚಿನ್ನದ ಬೀಡು, ಬಂಗಾರ ಬೆಳೆವ ನಾಡು ಎಂತಲೇ ಕರೆಸಿಕೊಂಡಿದ್ದ ಕೆಜಿಎಫ್'ನಲ್ಲಿ ಈಗ ದಾರಿದ್ರ್ಯತೆ ತಾಂಡವವಾಡುತ್ತಿದೆ. ಜನಪ್ರತಿನಿಧಿಗಳ ಹಾಗೂ ಕಾರ್ಮಿಕ ಸಂಘಟನೆಗಳ ಕಿತ್ತಾಟ, ಕಿತ್ತು ತಿನ್ನುವ ಬಡತನದಿಂದ ಸಾವಿರಾರು ಗಣಿ ಕಾರ್ಮಿಕರು ಜೀವನ ಸಾಗಿಸಲಾಗದೇ ಚಿಕಿತ್ಸೆಯೂ ಇಲ್ಲದೇ ಕಣ್ಮರೆಯಾಗುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ
ಕೋಲಾರ ಜಿಲ್ಲೆಯ ‘ಮಿನಿ ಇಂಗ್ಲೆಂಡ್§ ಎಂದೇ ಕರೆಸಿಕೊಳ್ಳುವ ಕೆಜಿಎಫ್ ಒಂದು ಕಾಲಕ್ಕೆ ತನ್ನ ಒಡಲಿನಿಂದ ಟನ್ಗಟ್ಟಲೇ ಚಿನ್ನದೊಂದಿಗೆ ಇಡೀ ವಿಶ್ವ ಗಮನ ಸೆಳೆದಿತ್ತು. ಗಣಿಯ ಕಾರ್ಯ ವೈಖರಿಯ ಪರಿಣಾಮ ಬಹಳಷ್ಟು ಕಾರ್ಮಿಕರು ಗಣಿಯೊಳಗಿನ ಸ್ಫೋಟ, ಭೂ ಕುಸಿತದಂಥ ಅವಘಡಗಳಲ್ಲಿ ಸತ್ತರೇ, ಇನ್ನು ಕೆಲವರು ಶ್ವಾಸಕೋಶದ ಕಾಯಿಲೆ ಸಿಲಿಕಾಸಿಯಾಸ್ನಿಂದ ಸಾಮಾನ್ಯ ಬೆನ್ನು ನೋವಿನಿಂದಲೂ ನರಳಿ ಜೀವ ತೆತ್ತಿದ್ದಾರೆ. ಗಣಿ ಕಾರ್ಮಿಕರ ಆರೋಗ್ಯಕ್ಕಾಗಿಯೇ ಬಿಜಿಎಂಎಲ್ ಆಸ್ಪತ್ರೆಯನ್ನು ಬ್ರಿಟಿಷ್ ಸರ್ಕಾರ ಸ್ಥಾಪನೆ ಮಾಡಿ ಚಿಕಿತ್ಸೆ ಒದಗಿಸುತ್ತಿತ್ತು, ಆದರೆ ಗಣಿ ಮುಚ್ಚಿದ ನಂತರ ರೋಗಗ್ರಸ್ಥ ಕಾರ್ಮಿಕರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ನಿರ್ವಹಣೆ ಇಲ್ಲದೆ ಮುಚ್ಚಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ನಿವೃತ್ತ ಗಣಿ ಕಾರ್ಮಿಕರು ಸದ್ದಿಲ್ಲದೇ ಕಣ್ಮರೆಯಾಗುತ್ತಿದ್ದಾರೆ.
2001ರ ಫೆಬ್ರವರಿ 28ರಂದು ಚಿನ್ನದ ಗಣಿ ಮುಚ್ಚಿ 15 ವರ್ಷ ಪೂರ್ಣವಾದರೂ ಗಣಿ ಮಾತ್ರ ಆರಂಭವಾಗಿಲ್ಲ. ಸುಪ್ರೀಂಕೋರ್ಟ್ ಆದೇಶ ಹಾಗೂ ಕೇಂದ್ರ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಮತ್ತೆ ಗಣಿ ಆರಂಭವಾಗಿ ಗಣಿ ಕಾರ್ಮಿಕರ ಬಾಳಲ್ಲಿ ಮತ್ತೆ ಸುವರ್ಣಯುಗ ಆರಂಭವಾಗುವ ಮಹಾತ್ವಾಕಾಂಕ್ಷೆ ಗರಿಗೆದರಿದೆ. ಗಣಿಕೆಲಸ ಮಾಡಿ ಸಾವಿಗೀಡಾದವರ ಬದುಕು ಕಷ್ಟದಲ್ಲಿದೆ. ಇಂತಹ ಸ್ಥಿತಿಯಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾರ್ಮಿಕರಿಗೆ ಸಿಗಬೇಕಾದ ಸೌಕರ್ಯ ಸಿಗದೇ ವರ್ಷದಿಂದ ವರ್ಷಕ್ಕೆ ಸಾವೀಗಿಡಾಗುತ್ತಿದ್ದಾರೆ.
ದಶಕಗಳು ಉರುಳಿದರೂ ಕಾರ್ಮಿಕರ ಬದುಕು ಮಾತ್ರ ಹಸನಾಗಿಲ್ಲ, ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಜಿಎಫ್ ಚಿನ್ನದ ಗಣಿಯ ಪುನಃಚೇತನಕ್ಕೆ ಮನಸ್ಸು ಮಾಡಿದರೆ ಅದೆಷ್ಟೋ ಕಾರ್ಮಿಕರ ಕುಟುಂಬಗಳು ಚೇತರಿಸಿಕೊಳ್ಳ ಬಹುದು.
