ಸಿಎಂ, ಕೆಪಿಸಿಸಿ ಕಾರ್ಯಾಧ್ಯಕ್ಷ ಮನವಿ ಮೇರೆಗೆ ಬಂದ್ ವಾಪಸ್ ಬಂದ್ ಬದಲು 13 ಜಿಲ್ಲೆಗಳಲ್ಲಿ ಸಾಂಕೇತಿಕ ಧರಣಿ
ಬೆಂಗಳೂರು[ಆ.01]: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಾರತಮ್ಯ ನೀತಿ ಹೇಳಿಕೆ ವಿರೋಧಿಸಿ ಅ.2ರಂದು ಕರೆಯಲಾಗಿದ್ದ ಉತ್ತರ ಕರ್ನಾಟಕ ಬಂದ್ ಅನ್ನು ಹಿಂಪಡೆಯಲಾಗಿದೆ.
ಬಂದ್ ನಡೆಸುವುದಿಲ್ಲ ಎಂದು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಸಮಿತಿ ಗೌರವ ಅಧ್ಯಕ್ಷ ಬಸವರಾಜ್ ದಿಂಡೂರ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸಭೆ ಸೇರಿದ್ದ ಸಮಿತಿಯ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಬಂದ್ ಕೈಗೊಳ್ಳುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.
ಸಿಎಂ ಮತ್ತು ಕಾಂಗ್ರೆಸ್ ಕಾರ್ಯಾಧ್ಯಕ್ಷರ ಮನವಿ ಮೇರೆಗೆ ಹೋರಾಟಗಾರರು ಬಂದ್ ವಾಪಸ್ ಪಡೆದಿದ್ದಾರೆ.ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಬಂದ್ ಬದಲು ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 13 ಜಿಲ್ಲೆಗಳಲ್ಲಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಿ ತಹಶೀಲ್ದಾರ್, ಡಿಸಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಜನಜೀವನಕ್ಕೆ ತೊಂದರೆ ನೀಡುವುದಿಲ್ಲ’. ಎಂದು ದಿಂಡೂರ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸಿಎಂ ಕುಮಾರಸ್ವಾಮಿ ಸಮಾರಂಭವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಪ್ರಸ್ತಾಪ ಮಾಡಿದ್ದರು. ಪ್ರತ್ಯೇಕ ರಾಜ್ಯದ ಕೂಗಿಗೆ ಇದು ತುಪ್ಪ ಸುರಿದಂತಾಗಿತ್ತು. ವಿರೋಧ ಪಕ್ಷಗಳ ನಾಯಕರು ಸಿಎಂ ಹೇಳಿಕೆಯನ್ನು ವಿರೋಧಿಸಿದ್ದರು. ಪ್ರತ್ಯೇಕ ರಾಜ್ಯದ ಪರವಿದ್ದ ಹೋರಾಟಗಾರರಿಗೆ ಕುಮಾರಸ್ವಾಮಿಯವರ ಮಾತು ಕೆರಳಿಸಿತ್ತು.
