‘‘ನಾಗರಿಕರು ಠಾಣೆಗೆ ಬಂದು ದೂರು ನೀಡುವ ಅಗತ್ಯವಿಲ್ಲ. ವಾಟ್ಸ್‌ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌ ಹಾಗೂ ಪೊಲೀಸ್‌ ಆ್ಯಪ್‌ (ಈ-ಲಾಸ್ಟ್‌ ಆ್ಯಪ್‌) ಮೂಲಕ ದೂರು ನೀಡುವ ಸೌಲಭ್ಯ ಈಗಾಗಲೇ ಇದೆ."
ಬೆಂಗಳೂರು(ಜ. 02): ನಿನ್ನೆ ಭಾನುವಾರ 32ನೇ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್, ‘‘ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತೇನೆ. ಅಪರಾಧ ನಿಯಂತ್ರಣ ಮಾಡುವುದೇ ನನ್ನ ಪ್ರಮುಖ ಗುರಿ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯೇ ಮುಖ್ಯ ಆದ್ಯತೆ. ನಾಗರಿಕರು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಬಹುದು. ಸರಹದ್ದಿನ ಬಗ್ಗೆ ಚಿಂತಿಸಬೇಕಿಲ್ಲ. ಸಾಮಾಜಿಕ ತಾಣಗಳನ್ನು ಮತ್ತಷ್ಟು ಸಕ್ರಿಯಗೊಳಿಸುತ್ತೇನೆ ಎಂದರು.
‘‘ನಾಗರಿಕರು ಠಾಣೆಗೆ ಬಂದು ದೂರು ನೀಡುವ ಅಗತ್ಯವಿಲ್ಲ. ವಾಟ್ಸ್'ಆ್ಯಪ್, ಟ್ವಿಟರ್, ಫೇಸ್'ಬುಕ್ ಹಾಗೂ ಪೊಲೀಸ್ ಆ್ಯಪ್ (ಈ-ಲಾಸ್ಟ್ ಆ್ಯಪ್) ಮೂಲಕ ದೂರು ನೀಡುವ ಸೌಲಭ್ಯ ಈಗಾಗಲೇ ಇದೆ. ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ, ದೂರಿನ ಬಳಿಕ ಎಫ್ಐಆರ್, ಚಾರ್ಜ್'ಶೀಟ್, ಬಿ ಅಥವಾ ಸಿ ರಿಪೋರ್ಟ್ ಒಟ್ಟಾರೆ ಪ್ರಕರಣ ಸ್ಥಿತಿಗತಿ ಏನಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಸಂದೇಶದ ಮೂಲಕ ನೀಡಲು ಪ್ರಯತ್ನಿಸಲಾಗುತ್ತದೆ,'' ಎಂದು ತಿಳಿಸಿದರು.
‘‘ಇನ್ನು ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇದೆ. ಇದನ್ನು ತಡೆಯಲು ಸೂಕ್ತ ಕ್ರಮಕೈಗೊಳ್ಳುತ್ತೇನೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಆದರೆ, ಸಾಮಾನ್ಯ ವಾಹನ ಸವಾರರನ್ನು ಅನವಶ್ಯಕವಾಗಿ ತಪಾಸಣೆ(ಚಾಲನಾ ಪರವಾನಿಗಿ, ವಾಹನ ನೊಂದಣಿ ಪತ್ರ) ನೆಪದಲ್ಲಿ ತೊಂದರೆ ಕೊಡುವಂತಿಲ್ಲ. ಸಿಬ್ಬಂದಿ ಎದುರಲ್ಲಿ ನಿಯಮ ಮೀರಿ ನಡೆದುಕೊಂಡರೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಲು ಸಾಧ್ಯವಿಲ್ಲ. ಈ ತೀರ್ಮಾನದಿಂದ ಸಂಚಾರ ನಿಯಂತ್ರಣ ಕೂಡ ಕಡಿಮೆಯಾಗುತ್ತದೆ. ಹಾಗಂತ ಸಾರ್ವಜನಿಕರು ನಿಯಮ ಮೀರಿ ನಡೆದುಕೊಳ್ಳದೆ, ಸಂಚಾರ ನಿಯಮ ಪಾಲಿಸಬೇಕು,'' ಎಂದು ಮನವಿ ಮಾಡಿದರು.
15 ದಿನದಲ್ಲಿ ಪಾಸ್'ಪೋರ್ಟ್ ಪರಿಶೀಲನೆ:
‘‘ಪಾಸ್ಪೋರ್ಟ್ ಸೇರಿದಂತೆ ಯಾವುದೇ ಪೊಲೀಸ್ ಪರಿಶೀಲನೆ, ತಪಾಸಣೆಗಳನ್ನು 15 ದಿನಗಳಲ್ಲಿ ಮುಕ್ತಾಯಕ್ಕೆ ಸೂಚಿಸಲಾಗಿದೆ. ಪಾಸ್ ಪೋರ್ಟ್ ಪರಿಶೀಲನೆಗೆ ಪೊಲೀಸರು ತಿಂಗಳುಗಟ್ಟಲೇ ತೆಗೆದು ಕೊಳ್ಳುತ್ತಾರೆ ಎಂಬ ಆರೋಪ ವಿತ್ತು. ಅದನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದು 10 ದಿನಕ್ಕೆ ಕಡಿತಗೊಳಿಸುತ್ತೇನೆ. ಅರ್ಜಿ ಸಲ್ಲಿಸಿ 15 ದಿನ ಕಳೆದರೂ ಪೊಲೀಸ್ ಪರಿಶೀಲನೆ ಆಗದಿದ್ದರೆ ಮುಂದಿನ ಭಾನುವಾರ ಆಯಾ ಠಾಣೆಗೆ ಬಂದು ದೂರು ನೀಡಬಹುದು,'' ಎಂದರು.
ಪಶ್ಚಿಮ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಮಾಲಿನಿ ಕೃಷ್ಣಮೂರ್ತಿ, ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಎಸ್.ರವಿ ಅಧಿಕಾರ ಸ್ವೀಕರಿಸಿದರು.
(ಕನ್ನಡಪ್ರಭ ವಾರ್ತೆ)
epaper.kannadaprabha.in
