ನಮಾಜ್ ಗೆ ನಿಷೇಧ ಹೇರಿ ಉತ್ತರ ಪ್ರದೇಶ ಪೊಲೀಸರು ಹೊರಡಿಸಿದ ಆದೇಶ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ನೋಯ್ಡಾದಲ್ಲಿ ಪಾರ್ಕ್ ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ಮಾಡದಂತೆ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ನೋಯ್ಡಾ: ನೋಯ್ಡಾದಲ್ಲಿ ಪಾರ್ಕ್ ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ಮಾಡದಂತೆ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಹೊರಡಿಸಿದ ಆದೇಶವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.
ನೋಯ್ಡಾದ ಕೈಗಾರಿಕಾ ಪ್ರದೇಶವಾದ ‘ಸೆಕ್ಟರ್ 58’ರ ನಿರ್ದಿಷ್ಟಪ್ರದೇಶವೊಂದರಲ್ಲಿ ಶುಕ್ರವಾರ ನಮಾಜ್‌ಗೆ ಅವಕಾಶ ಕೋರಿ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಮನವಿಯನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದರು. ಇದರ ಹೊರತಾಗಿಯೂ ಸುತ್ತಮುತ್ತಲ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಮುಸ್ಲಿಮರು ಸಮೀಪದ ಪಾರ್ಕ್ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಶುಕ್ರವಾರ ನಮಾಜ್ ಮಾಡುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ, ಪಾರ್ಕ್ ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ಮಾಡಕೂಡದು. ಧಾರ್ಮಿಕ ಕಾರ್ಯಕ್ರಮಗಳನ್ನು ಕಚೇರಿಯ ಒಳಗೆ ಅಥವಾ ಮಸೀದಿಯೊಳಗೆ ನಡೆಸಬೇಕು. ಒಂದು ವೇಳೆ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ನಮಾಜ್ ಮಾಡಿದರೆ, ಅದಕ್ಕೆ ಕಂಪನಿಗಳೇ ಹೊಣೆ ಎಂದು ಪೊಲೀಸರು ಆದೇಶ ಹೊರಡಿಸಿದ್ದಾರೆ.
ಈ ಆದೇಶ ವಿವಾದಕ್ಕೆ ಕಾರಣವಾಗುತ್ತಲೇ ಸ್ಪಷ್ಟನೆ ನೀಡಿರುವ ಪೊಲೀಸರು, ಈ ನಿಷೇಧ ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಯಾರಿಗೂ ಅಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಆದೇಶದ ಅರ್ಥವಾಗಿದೆ ಎಂದು ಹೇಳಿದ್ದಾರೆ.
