ಹಿಂದು ದೇವಾಲಯಗಳಿಂದ ಬರುವ ಆದಾಯವನ್ನು ಮಸೀದಿ, ಚರ್ಚ್'ಗಳಿಗೂ ಬಳಸಲಾಗುತ್ತಿದೆ ಎಂಬ ಮಾಹಿತಿಗಳು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಇದು ನಿಜವೇ? ಎಂದು ಕೇಳಲಾದ ಪ್ರಶ್ನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಸಚಿವ ರುದ್ರಪ್ಪ ಲಮಾಣಿ, ಹೀಗೆಲ್ಲಾ ಆಗುವುದಕ್ಕೆ ಸಾಧ್ಯವೇ ಇಲ್ಲ. ಇದೆಲ್ಲಾ ಸತ್ಯಕ್ಕೆ ದೂರ. ಇಂಥ ವದಂತಿಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಿದರು.

ವಿಧಾನಪರಿಷತ್ತು: ಮುಜರಾಯಿ ದೇವಸ್ಥಾನಗಳ ಆದಾಯವನ್ನು ಚರ್ಚ್ ಮತ್ತು ಮಸೀದಿಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆಯೇ ಎಂದು ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನಿಸಿ ಅಚ್ಚರಿ ಮೂಡಿಸಿದರು.

ಹಿಂದು ದೇವಾಲಯಗಳಿಂದ ಬರುವ ಆದಾಯವನ್ನು ಮಸೀದಿ, ಚರ್ಚ್'ಗಳಿಗೂ ಬಳಸಲಾಗುತ್ತಿದೆ ಎಂಬ ಮಾಹಿತಿಗಳು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಇದು ನಿಜವೇ? ಹಾಗಾದರೆ ಹಿಂದಿನ ವರ್ಷ ದೇವಸ್ಥಾನಗಳಿಂದ ಬಂದಿರುವ ರೂ.476 ಕೋಟಿ ಆದಾಯದಲ್ಲಿ ರೂ.316 ಕೋಟಿ ಮಾತ್ರ ವೆಚ್ಚವಾಗಿದೆ. ಉಳಿದ ಹಣ ಎಲ್ಲಿ ಹೋಗಿದೆ? ಇದನ್ನು ಹಜ್‌ ಯಾತ್ರೆ ಅಥವಾ ಪಾರ್ಥನಾ ಮಂದಿರಗಳಿಗೆ ನೀಡುವ ಸಾಧ್ಯತೆ ಇದೆಯೇ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದರು.

ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಸಚಿವ ರುದ್ರಪ್ಪ ಲಮಾಣಿ, ಹೀಗೆಲ್ಲಾ ಆಗುವುದಕ್ಕೆ ಸಾಧ್ಯವೇ ಇಲ್ಲ. ಇದೆಲ್ಲಾ ಸತ್ಯಕ್ಕೆ ದೂರ. ಯಾರೋ ವಾಟ್ಸ್‌ ಆ್ಯಪ್‌ನಲ್ಲಿ ಕಳುಹಿಸಿದ್ದನ್ನು ನಿಜ ಎಂದು ತಿಳಿಯಬೇಡಿ. ಇಂಥ ವದಂತಿಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಿದರು. ದೇವಸ್ಥಾನಗಳಿಂದ ಬರುವ ಆದಾಯವನ್ನು ದೇವಸ್ಥಾನಗಳ ಅಭಿವೃದ್ಧಿಗೇ ಬಳಸಲಾಗುತ್ತದೆಯೇ ವಿನಃ ಸರ್ಕಾರ ಕೂಡ ಅದನ್ನು ಪಡೆಯಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದರು.

(ಸಾಂದರ್ಭಿಕ ಚಿತ್ರ)