ಭೋಪಾಲಗ್[ಜೂ.14]: ಮಗುವಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದ ತಾಯಿ, ಮಗುವಿನ ತೊಳಲಾಟ ನೋಡಲಾಗದೆ ತನ್ನ ಕೈಯ್ಯಾರೆ ಸಾಯಿಸಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಖಂಡವಾದಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನಿಡಲಾಗದ ತಾಯಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾಳೆ.

ಹಮದ್ ಪುರದ ಖೈಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಾಯಿಯನ್ನು ಮಾಯಾ ಡಾಂಗೋರೆ ಎಂದು ಗುರುತಿಸಲಾಗಿದೆ. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಇವರ ಕುಟುಂಬದಲ್ಲಿ 6 ವರ್ಷಗಳ ಹಿಂದೆ ಹೆಣ್ಮಗುವೊಂದು ಜನಿಸಿತ್ತು. ಹೀಗೆ ತಂದೆ, ತಾಯಿ ಹಾಗೂ ಮಗು ಅದೇಗೋ ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗಲೇ ಕಳೆದ 7 ತಿಂಗಳ ಹಿಂದೆ ಮಾಯಾಗೆ ಮತ್ತೊಂದು ಮಗು ಜನಿಸಿದೆ. 

ಮಗುವಿನ ಮೃತದೇಹವನ್ನು ಕೈಯ್ಯಲ್ಲೇ ಹಿಡಿದು ಕುಳಿತಿದ್ದಳು

ಆರೋಪಿ ಮಹಿಳೆ ಮಧ್ಯಾಹ್ನದಿಂದ ಸಂಜೆಯವರೆಗೆ ಪುಟ್ಟ ಮಗುವಿನ ಮೃತದೇಹವನ್ನು ಮಡಿಲಲ್ಲೇ ಕುಳ್ಳಿರಿಸಿಕೊಂಡಿದ್ದಳು. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಮಹಿಳೆಯರ ಕುಟುಂಬ ಸದಸ್ಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಲುಪಿದ ಪೊಲೀಸರು ಕೂಡಲೇ ಮಗುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮಗುವನ್ನು ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಗಂಡ ಬಿಟ್ಟು ಹೋಗಿದ್ದ

ಮಾಯಾಗೆ ಎರಡನೇ ಮಗುವಾದಾಗಿನಿಂದ ಮಾಯಾ ಹಾಗೂ ಆಕೆಯ ಗಂಡನ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಕೆಲವೊಮ್ಮೆ ಗಂಡ ಮಾಯಾನನ್ನು ಥಳಿಸುತ್ತಿದ್ದ. ಮನೆ ಬಿಟ್ಟು ಹೋದ ದಿನವೂ ಆತ ಮಾಯಾ ಹಾಗೂ ತನ್ನ ಹಿರಿ ಮಗಳಿಗೆ ಥಳಿಸಿ ಹೋಗಿದ್ದ. ಇದಾದ ಬಳಿಕ ಮಾಯಾಳೇ ತನ್ನಿಬ್ಬರು ಮಕ್ಕಳ ಆರೈಕೆ ನೊಡಿಕೊಳ್ಳುತ್ತಿದ್ದಳು. ಕುಟುಂಬದ ಜವಾಬ್ದಾರಿಯೂ ಆಕೆಯ ಮೇಲಿತ್ತು.

ಆರ್ಥಿಕ ಸಮಸ್ಯೆಯಿಂದ ನಲುಗಿದ್ದ ಮಾಯಾ

ಆರ್ಥಿಕವಾಗಿ ಬಹಳಷ್ಟು ಕಷ್ವನ್ನೆದುರಿಸುತ್ತಿದ್ದ ಮಾಯಾಳನ್ನು 7 ತಿಂಗಳ ಮಗುವಿನ ಅನಾರೋಗ್ಯ ಮತ್ತಷ್ಟು ಕಂಗೆಡಿಸಿತ್ತು. ಅತ್ತ ಕೂಲಿ ಹಣವೂ ಸಿಗದೇ ಕಮಗಾಲಾಗಿದ್ದಳು. ಅಂತಿಮವಾಗಿ ಪರಿಸ್ಥಿತಿ ಎದುರು ಮಂಡಿಯೂರಿದ ಮಾಯಾ ಬೇರೆ ವಿಧಿ ಇಲ್ಲದೇ ತನ್ನ ಕರುಳ ಕುಡಿಯನ್ನು ತನ್ನ ಕೈಯ್ಯಾರೆ ಕೊಂದಿದ್ದಾಳೆ.