ಯುದ್ಧದಿಂದ ಜರ್ಜರಿತವಾಗಿರುವ ಅಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಭಾರತ, ಆ ದೇಶದಲ್ಲಿ ತಾಲಿಬಾನ್ ಉಗ್ರರನ್ನು ಮಟ್ಟ ಹಾಕಲು ಅಮೆರಿಕ ನೇತೃತ್ವದಲ್ಲಿ ವಿವಿಧ ದೇಶಗಳು ನಡೆಸುತ್ತಿರುವ ಕಾರ್ಯಾಚರಣೆಗೆ ತನ್ನ ಯೋಧರನ್ನು ರವಾನಿಸಲು ಸ್ಪಷ್ಟವಾಗಿ ನಿರಾಕರಿಸಿದೆ.
ನವದೆಹಲಿ(ಸೆ.27): ಯುದ್ಧದಿಂದ ಜರ್ಜರಿತವಾಗಿರುವ ಅಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಭಾರತ, ಆ ದೇಶದಲ್ಲಿ ತಾಲಿಬಾನ್ ಉಗ್ರರನ್ನು ಮಟ್ಟ ಹಾಕಲು ಅಮೆರಿಕ ನೇತೃತ್ವದಲ್ಲಿ ವಿವಿಧ ದೇಶಗಳು ನಡೆಸುತ್ತಿರುವ ಕಾರ್ಯಾಚರಣೆಗೆ ತನ್ನ ಯೋಧರನ್ನು ರವಾನಿಸಲು ಸ್ಪಷ್ಟವಾಗಿ ನಿರಾಕರಿಸಿದೆ.
ಅಮೆರಿಕದ ರಕ್ಷಣಾ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಭಾರತ ಭೇಟಿ ಕೈಗೊಂಡಿರುವ ಜಿಮ್ ಮ್ಯಾಟಿಸ್ ಜತೆಗೆ ಹಲವು ವಿಷಯಗಳ ಕುರಿತು ಮಂಗಳವಾರ ಚರ್ಚೆ ನಡೆಸಿದ ಬಳಿಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯ ತಿಳಿಸಿದ್ದಾರೆ. ಆಫ್ಘಾನಿಸ್ತಾನ ನೆಲದ ಮೇಲೆ ಭಾರತ ಬೂಟುಗಳು ಇರುವುದಿಲ್ಲ ಎಂಬುದನ್ನು ಅಮೆರಿಕಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ನೆರೆ ದೇಶಗಳ ಪರಿಸ್ಥಿತಿ ಹಾಗೂ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಮ್ಯಾಟಿಸ್ ಅವರ ಜತೆ ಚರ್ಚೆ ನಡೆದಿದೆ. ಪಾಕಿಸ್ತಾನದಿಂದ ಸೃಷ್ಟಿಯಾಗುತ್ತಿರುವ ಭಯೋತ್ಪಾದನೆ ಕುರಿತು ಆ ದೇಶದ ಜತೆಗೆ ಮಾತನಾಡುವುದಾಗಿ ಮ್ಯಾಟಿಸ್ ತಿಳಿಸಿದ್ದಾರೆ ಎಂದರು.
