ಸ್ಮಾರ್ಟ್‌ಸಿಟಿಗೆ ಮೊದಲ ಸಾಲಿನಲ್ಲಿ ಆಯ್ಕೆಯಾಗಿದ್ದ ಬೆಳಗಾವಿಯಲ್ಲಿ ಇದೀಗ ವಿಮಾನಯಾನ ಸೌಲಭ್ಯ ಇದೀಗ ಮೊಟಕುಗೊಳ್ಳುವ ಆತಂಕ ಎದುರಾಗಿದೆ. ಇದೀಗ ಇಲ್ಲಿ ಸೇವೆ ನೀಡುತ್ತಿರುವ ಏಕೈಕ ವಿಮಾನಯಾನ ಕಂಪನಿಯಾದ ಸ್ಪೈಸ್‌ಜೆಟ್‌ನ ನಾಗರಿಕ ವಿಮಾನಗಳು ಮೇ 14ರಿಂದ ಹುಬ್ಬಳ್ಳಿಯಿಂದ ಸೇವೆ ಆರಂಭಿಸಲಿದ್ದು, ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಲಿವೆ.

ಕಿರಣ ಮಾಸಣಗಿ ಬೆಳಗಾವಿ

ಬೆಳಗಾವಿ : ಸ್ಮಾರ್ಟ್‌ಸಿಟಿಗೆ ಮೊದಲ ಸಾಲಿನಲ್ಲಿ ಆಯ್ಕೆಯಾಗಿದ್ದ ಬೆಳಗಾವಿಯಲ್ಲಿ ಇದೀಗ ವಿಮಾನಯಾನ ಸೌಲಭ್ಯ ಇದೀಗ ಮೊಟಕುಗೊಳ್ಳುವ ಆತಂಕ ಎದುರಾಗಿದೆ. ಇದೀಗ ಇಲ್ಲಿ ಸೇವೆ ನೀಡುತ್ತಿರುವ ಏಕೈಕ ವಿಮಾನಯಾನ ಕಂಪನಿಯಾದ ಸ್ಪೈಸ್‌ಜೆಟ್‌ನ ನಾಗರಿಕ ವಿಮಾನಗಳು ಮೇ 14ರಿಂದ ಹುಬ್ಬಳ್ಳಿಯಿಂದ ಸೇವೆ ಆರಂಭಿಸಲಿದ್ದು, ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಲಿವೆ.

ನಗರದ ಸಾಂಬ್ರಾ ವಿಮಾನ ನಿಲ್ದಾಣದಿಂದ ದಿನಂಪ್ರತಿ ಐದು ಬಾರಿ ಸ್ಪೈಸ್‌ ಜೆಟ್‌ ಹಾರಾಟ ನಡೆಸುತ್ತಿದ್ದು, ಬೆಳಗಾವಿಯಿಂದ ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್‌ ಮತ್ತು ಬೆಂಗಳೂರನ್ನು ಸಂಪರ್ಕಿಸುತ್ತಿದ್ದವು. ಬೆಳಗಾವಿಯಿಂದ ಆರಂಭದಲ್ಲಿ ದಿನಂಪ್ರತಿ 6500 ಪ್ರಯಾಣಿಕರು ಸಂಚರಿಸುತ್ತಿದ್ದು, ಇದೀಗ ಅದರಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಅಂದರೆ ದಿನಂಪ್ರತಿ ಶಿಕ್ಷಣ ತಜ್ಞರು, ವೈದ್ಯರು, ಕೈಗಾರಿಕೆ ಮತ್ತು ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸೇರಿದಂತೆ ಸುಮಾರು 17,000 ಜನರು ದಿನಂಪ್ರತಿ ಸಂಚರಿಸುತ್ತಿದ್ದಾರೆ. ಆದರೆ ಇದೀಗ ಈ ನಾಗರಿಕ ಜೆಟ್‌ ವಿಮಾನಗಳು ಮೇ 14ರಿಂದ ಹುಬ್ಬಳ್ಳಿಯಿಂದ ಸಂಚಾರ ಆರಂಭಿಸಲಿದ್ದು, ಬೆಳಗಾವಿಗೆ ವಿಮಾನಗಳ ಸಂಚಾರ ಸೇವೆ ಸ್ಥಗಿತಗೊಳಿಸಲಿವೆ. ಇದು ಬೆಳಗಾವಿ ವ್ಯಾಪಾರೋದ್ಯಮಗಳ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ ಎಂಬ ಕಳವಳ ಉಂಟಾಗಿದೆ.

ಹುಬ್ಬಳ್ಳಿಯಿಂದ ಕಾರ್ಯಾಚರಣೆ:

ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ಉಡಾನ್‌ ಅಡಿಯಲ್ಲಿ ಹುಬ್ಬಳ್ಳಿ ನಗರದಿಂದ ಕಾರ್ಯಾಚರಣೆ ಮಾಡುವುದಾಗಿ ಟೆಂಡರ್‌ನಲ್ಲಿ ಪ್ರಕಟಿಸುವ ಮೂಲಕ ಇದುವರೆಗೂ ಅದು ಬೆಳಗಾವಿಯಿಂದ ನಡೆಸುತ್ತಿದ್ದ ಕಾರ್ಯಾಚರಣೆ ಕೇಂದ್ರ ಬದಲಿಸುವುದಾಗಿ ಮಾಹಿತಿ ನೀಡಿದೆ. ಇದಕ್ಕೆ ಈಗಾಗಲೇ ಅನುಮೋದನೆ ಕೂಡ ಸಿಕ್ಕಿದ್ದು, ಮೇ 13ರಂದು ಸ್ಪೈಸ್‌ ಜೆಟ್‌ನ ನಾಲ್ಕು ವಿಮಾನಗಳು ಕೊನೆಯದಾಗಿ ಬೆಳಗಾವಿ ನೆಲದಿಂದ ಹಾರಲಿವೆ. ನಂತರದಲ್ಲಿ ಅಂದರೆ ಮೇ 14ರಿಂದ ಅವು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆಗೆ ಇಳಿಯಲಿವೆ.

ಬೆಳಗಾವಿ ಸಾಂಬ್ರಾ ಏರ್‌ಪೋರ್ಟ್‌ ಗತಿ ಏನು?:

ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ ನಿರ್ಮಾಣಕ್ಕೆ ಮಾವಿನಕಟ್ಟಿ, ಹೊನ್ನಿಹಾಳ, ಬಸರೀಕಟ್ಟಿ, ಸಾಂಬ್ರಾ, ಬಾಳೇಕುಂದ್ರಿ ಮತ್ತು ಸಿಂಧೋಳಿ ಗ್ರಾಮಗಳ ಸುಮಾರು 2000ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಅಲ್ಲದೇ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಹೆಚ್ಚುವರಿ ಸೌಲಭ್ಯಕ್ಕಾಗಿ ಮತ್ತಷ್ಟುಭೂಮಿ ವಶಕ್ಕೆ ಪಡೆದಿದ್ದು, ಅಲ್ಲಿನ ನಿವಾಸಿಗಳನ್ನೂ ತೆರವುಗೊಳಿಸಲಾಗಿದೆ. ಇದೀಗ ಸಾವಿರಾರು ಕೋಟಿ ವೆಚ್ಚ ಮಾಡಿ ಸಿದ್ಧಗೊಂಡ ಬೆಳಗಾವಿ ವಿಮಾನ ನಿಲ್ದಾಣ ಎರಡು ಹಂತಗಳಲ್ಲಿ ನವೀಕರಣಗೊಂಡಿದ್ದು, ಅದಕ್ಕಾಗಿ ಮತ್ತಷ್ಟುಕೋಟಿ ಹಣವನ್ನು ವ್ಯಯಿಸಲಾಗಿದೆ. ಆದಾಗ್ಯೂ ಇಲ್ಲಿಂದ ಕಾರ್ಯಾಚರಣೆ ಆಗುತ್ತಿದ್ದುದು ಕೇವಲ 4 ವಿಮಾನಗಳು ಮಾತ್ರ. ಇದೀಗ ಅವೂ ಬೇರೆಡೆಯಿಂದ ಸಂಚಾರ ಆರಂಭಿಸಿದರೆ ವಿಮಾನ ನಿಲ್ದಾಣದ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಇನ್ನು ಇಲ್ಲಿನ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ತಮ್ಮ ಇತರೆ ಕೆಲಸಗಳಿಗೆ ವಿಮಾನ ಏರಲೇಬೇಕಾದ ಸಂದರ್ಭದಲ್ಲಿ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಸಂಚರಿಸಬೇಕಾದ ಅನಿವಾರ್ಯತೆæ ಎದುರಾಗಿದೆ. ಇನ್ನು ಸ್ಪೈಸ್‌ ಜೆಟ್‌ ವಿಮಾನಗಳು ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಂದು ಗಂಟೆ ಐದು ನಿಮಿಷಗಳಲ್ಲಿ ತಲುಪುತ್ತಿದ್ದು, ಅದೇ ಬೆಳಗಾವಿಗೆ ಒಂದೂವರೆ ಗಂಟೆ ಕಾಲಾವಕಾಶ ಬೇಕಿದೆ. ಈ ಅವಧಿ ಉಳಿತಾಯದಿಂದ ಮತ್ತೊಂದು ನಗರಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂಬುದು ಸ್ಪೈಸ್‌ಜೆಟ್‌ ಸಿಬ್ಬಂದಿ ಅಭಿಪ್ರಾಯ.

ಬೆಳಗಾವಿ ಬೆಸ್ಟ್‌...!:

ವಿಮಾನಯಾನ ತಂತ್ರಜ್ಞರ ಪ್ರಕಾರ ಹಲವು ಗಿರಿ-ಶಿಖರಗಳಿಂದ ದೂರವೇ ಸಮತಟ್ಟಾದ, ಸಮಶೀತೋಷ್ಣ ಪ್ರದೇಶದಲ್ಲಿರುವ ಬೆಳಗಾವಿ ವಿಮಾನಯಾನಕ್ಕೆ ಹೇಳಿ ಮಾಡಿಸಿದ ಪ್ರದೇಶ. ಇಲ್ಲಿನ ವಾತಾವರಣ ಬಹುತೇಕ ವಿಮಾನಯಾನ ಸಂಪರ್ಕಕ್ಕೆ ಹೇಳಿ ಮಾಡಿಸಿದ್ದಾಗಿದೆ. ಆದರೆ ಬೆಳಗಾವಿಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಸರಕು-ಸಾಗಣೆ ಇಲ್ಲವಾಗಿದೆ. ಅಲ್ಲದೇ ಈ ಸರಕು ಸಾಗಣಗೆ ಪೂರಕವಾದ ಉದ್ಯಮವಾಗಲಿ, ಅಗತ್ಯ ಸೌಲಭ್ಯಗಳಾಗಲಿ ಬೆಳಗಾವಿಯ ವಿಮಾನನಿಲ್ದಾಣದಲ್ಲಿ ಇಲ್ಲದಿರುವುದು ಪ್ರಮುಖ ಕೊರತೆಯಾಗಿ ಕಾಣಿಸಿಕೊಂಡಿದೆ. ಈ ಕಾರಣದಿಂದಲೂ ವಿಮಾನ ಹಾರಾಟವನ್ನು ಸ್ಥಳಾಂತರಿಸಿರಬಹುದು ಎಂಬುದು ತಜ್ಞರ ಅಭಿಪ್ರಾಯ.

ಉಡಾನ್‌ ಯೋಜನೆ ಅಡಿಯಲ್ಲಿ ಸ್ಪೈಸ್‌ಜೆಟ್‌ ಹುಬ್ಬಳ್ಳಿಯಿಂದ ವಿಮಾನಯಾನಕ್ಕೆ ಟೆಂಡರ್‌ ಪಡೆದುಕೊಂಡಿದೆ. ಹೀಗಾಗಿ ಮೇ 14ರಿಂದ ಹುಬ್ಬಳ್ಳಿಯಿಂದಲೇ ಕಾರ್ಯಾಚರಣೆ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಆದರೆ ಬೆಳಗಾವಿಯಲ್ಲಿ ಪರ್ಯಾಯ ವ್ಯವಸ್ಥೆ ಆಗುವವರೆಗೆ ಬೆಳಗಾವಿಯಿಂದಲೂ ವಿಮಾನಸೇವೆ ನಡೆಸುವಂತೆ ಕೋರಲಾಗಿದೆ. ಈ ಕುರಿತು ಬೆಳಗಾವಿಯಂದ ನಿಯೋಗ ಒಯ್ದು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಲಾಗುವುದು.

- ಸುರೇಶ ಅಂಗಡಿ, ಸಂಸದ