ಮುಂಬೈ: ನೋಟು ಅಪನಗದೀಕರಣದ ವೇಳೆ ನಗದು ಬಿಕ್ಕಟ್ಟು ಸುಧಾರಣೆ ಹಾಗೂ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಪ್ರೋತ್ಸಾಹಕವಾಗಿ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಂಡವರಿಗೆ ನೀಡಲಾಗುತ್ತಿದ್ದ ಕ್ಯಾಶ್‌ಬ್ಯಾಕ್‌ ಕೊಡುಗೆಯನ್ನು ನಿಲ್ಲಿಸಲು ತೈಲ ಕಂಪನಿಗಳು ಮುಂದಾಗಿವೆ. 2019ರ ಪ್ರಾರಂಭದಿಂದಲೇ ಪೆಟ್ರೋಲ್‌ ಬಂಕ್‌ಗಳಲ್ಲಿ ಆನ್‌ಲೈನ್‌ ಅಥವಾ ಕಾರ್ಡ್‌ ಪಾವತಿಗೆ ನೀಡಲಾಗುತ್ತಿರುವ ಕ್ಯಾಶ್‌ಬ್ಯಾಕ್‌ ಕೊಡುಗೆ ಕೊನೆಯಾಗಲಿದೆ ಎಂದು ಹೇಳಲಾಗಿದೆ.

2016ರಲ್ಲಿ 500 ರು. ಹಾಗೂ 1000 ರು. ಮೌಲ್ಯದ ನೋಟುಗಳ ನಿಷೇಧ ಮಾಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರ ಮತ್ತು ಪ್ಲಾಸ್ಟಿಕ್‌(ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳು) ಕರೆನ್ಸಿ ಪ್ರೋತ್ಸಾಹಕ್ಕಾಗಿ ಹಲವು ಕೊಡುಗೆಗಳನ್ನು ಘೋಷಣೆ ಮಾಡಿತ್ತು. 

ಇದರ ಪ್ರಕಾರ, ಪೆಟ್ರೋಲ್‌ ಬಂಕ್‌ಗಳಲ್ಲಿಯೂ ಕಾರ್ಡ್‌ ಮತ್ತು ಆನ್‌ಲೈನ್‌ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ 75 ಪೈಸೆಯಷ್ಟುಕ್ಯಾಶ್‌ಬ್ಯಾಕ್‌ ನೀಡಲಾಗುತ್ತಿತ್ತು. ಇದಾಗಿ 20 ತಿಂಗಳ ಬಳಿಕ 75 ಪೈಸೆಯನ್ನು 25 ಪೈಸೆಗೆ ಇಳಿಸಲಾಗಿತ್ತು. ಈ ರೀತಿ ಗ್ರಾಹಕರಿಗೆ ತೈಲ ಕಂಪನಿಗಳು ಒಟ್ಟು 1431 ಕೋಟಿ ರು. ಪಾವತಿ ಮಾಡಿದೆ. ಅಲ್ಲದೆ, 2017-18ನೇ ಸಾಲಿನಲ್ಲಿ ಕ್ಯಾಶ್‌ಬ್ಯಾಕ್‌ಗಾಗಿ 2000 ಕೋಟಿ ರು. ವ್ಯಯವಾಗುವ ಸಾಧ್ಯತೆಯಿದೆ ಎಂದು ತೈಲ ಕಂಪನಿಗಳು ಅಂದಾಜಿಸಿವೆ.