ಯಾದಗಿರಿ (ಜೂ. 21): ಜಿಲ್ಲೆಯ ಗುರುಮಠಕಲ್‌ ಮತಕ್ಷೇತ್ರದ ಚಂಡರಕಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ‘ಗ್ರಾಮ ವಾಸ್ತವ್ಯ’ಕ್ಕೂ ಮೊದಲೇ ಬ್ಯಾನರ್‌, ಬಂಟಿಂಗ್ಸ್‌ ವಿಚಾರದಲ್ಲಿ ಜಿಲ್ಲೆಯಲ್ಲಿ ಮೈತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಒಳಗೊಳಗೆ ಅಸಮಾಧಾನ ಸೃಷ್ಟಿಸಿದೆ.

ಯಾದಗಿರಿಯಿಂದ ಗುರುಮಠಕಲ್‌ ಮಾರ್ಗವಾಗಿ ಚಂಡರಕಿಗೆ ತೆರಳುವ ಸುಮಾರು 56 ಕಿ.ಮೀ. ದೂರದ ರಸ್ತೆಯುದ್ದಕ್ಕೂ ಗ್ರಾಮ ವಾಸ್ತವ್ಯಕ್ಕೆ ಶುಭ ಕೋರುವ ಬಂಟಿಂಗ್ಸ್‌, ಬ್ಯಾನರ್‌ಗಳ ಹಾರಾಟ ಮುಗಿಲು ಮುಟ್ಟಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ನಾಗನಗೌಡ ಕಂದಕೂರು ಹಾಗೂ ಪುತ್ರ ಶರಣಗೌಡ ಕಂದಕೂರು ಅವರ ಆಳೆತ್ತರದ ಕಟೌಟುಗಳು ಎಲ್ಲೆಡೆ ರಾರಾಜಿಸುತ್ತಿವೆ.

ಆದರೆ, ಸಮ್ಮಿಶ್ರ ಸರ್ಕಾರದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌, ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಈ ಭಾಗದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆಯವರ ಭಾವಚಿತ್ರಗಳು ಮಾತ್ರ ಎಲ್ಲೂ ಕಾಣದಿರುವುದು ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್‌ ಹುಮ್ನಾಬಾದ್‌ ಅವರ ಗಮನಕ್ಕೂ ಬಂದಿದ್ದು, ಅವರೂ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರಿಗೂ ಈ ವಿಚಾರ ಕುರಿತು ಕೆಲವರು ದೂರಿದಾಗ ಮೈತ್ರಿ ಪಕ್ಷ, ಅನಿವಾರ‍್ಯವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ವೇಳೆ ಸ್ಥಳೀಯ ಕಾಂಗ್ರೆಸ್‌ ನಾಯಕರ ನಡೆ ಮಾತ್ರ ತೀವ್ರ ಕುತೂಹಲ ಮೂಡಿಸಿದೆ. ಆದರೆ, ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಹುಲ್ಕಲ್‌ ಮಾತ್ರ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ಸಿಗರೆಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ನಾಳೆ ಹೇರೂರ(ಬಿ) ಗ್ರಾಮದಲ್ಲಿ ವಾಸ್ತವ್ಯ

ಕಲಬುರಗಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಂಡರಕಿ ಬಳಿಕ ಕಲಬುರಗಿ ಜಿಲ್ಲೆಯ ಹೇರೂರ (ಬಿ) ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದು, ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿದೆ. ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಕುಮಾರಸ್ವಾಮಿ ವಾಸ್ತವ್ಯ ಹೂಡಲಿರುವ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗಿದೆ.

ಮುರಿದ ಬಾಗಿಲು, ಕಿಟಕಿಗಳನ್ನು ಬದಲಾಯಿಸಲಾಗಿದೆ. ಶೌಚಾಲಯವನ್ನೂ ಶುಚಿಗೊಳಿಸಲಾಗಿದೆ. ಜತೆಗೆ, ಫರತಾಬಾದ್‌ನಿಂದ ಹೆರೂರ್‌(ಬಿ)ಗೆ ಮುಖ್ಯಮಂತ್ರಿ ರಸ್ತೆ ಮಾರ್ಗವಾಗಿಯೇ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ರಸ್ತೆಯ ದುರಸ್ತಿ ಕಾರ್ಯ ಭರದಿಂದ ಸಾಗಿದೆ.