ಬೆಂಗಳೂರು (ಜು. 10):  ಪರಿಶೀಲನೆ ನೆಪವೊಡ್ಡಿ ಶಾಸಕರ ರಾಜೀನಾಮೆ ಪರಿಶೀಲನೆ ವಿಳಂಬ ಮಾಡುತ್ತಿರುವ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ನಡೆ ಕಾನೂನುಬದ್ಧವಾಗಿಲ್ಲ ಹಾಗೂ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಸ್ಪೀಕರ್‌ ಅವರು ಈ ನಡವಳಿಕೆಯೇ ಮೂಲ ಕಾರಣ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ‘ಕನ್ನಡಪ್ರಭ’ ಜೊತೆಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್‌ ಹೇಳಿದ್ದಾರೆ. ಆದರೆ, ರಾಜೀನಾಮೆ ಪತ್ರದಲ್ಲಿ ನಿಖರವಾಗಿ ಯಾವ ಲೋಪದೋಷವಿದೆ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ನಿಯಮಗಳ ಪ್ರಕಾರ ಯಾವ ಲೋಪವಿದೆ ಎಂದು ಸ್ಪಷ್ಟಪಡಿಸಬೇಕಿತ್ತು ಎಂದರು.

ಅಲ್ಲದೆ, ಶಾಸಕರು ರಾಜೀನಾಮೆ ನೀಡಿರುವ ಪ್ರಕರಣಗಳಲ್ಲಿ ಸ್ಪೀಕರ್‌ ಅವರು ವಿಳಂಬ ಮಾಡುವುದಕ್ಕೆ ಅವಕಾಶವೇ ಇಲ್ಲ. ಇಂದಿನ ರಾಜಕೀಯ ಬಿಕ್ಕಟ್ಟಿಗೆ ಮೂಲ ಕಾರಣವೇ ಸ್ಪೀಕರ್‌. ಸಭಾಧ್ಯಕ್ಷರು ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ. ಆದರೆ, ರಾಜೀನಾಮೆಯನ್ನು ಅಂಗೀಕರಿಸದೆ ಸುದೀರ್ಘ ವಿಚಾರಣೆ ನಡೆಸುವ ಮಾದರಿಯಲ್ಲಿ ಪ್ರಕರಣವನ್ನು ವಿವಿಧ ದಿನಗಳಿಗೆ ನಿಗದಿಗೊಳಿಸಿ ಮತ್ತಷ್ಟುಸಂಕೀರ್ಣಗೊಳಿಸಿದ್ದಾರೆ ಎಂದು ಹೇಳಿದರು.

ತಿರಸ್ಕಾರಕ್ಕೆ ಎರಡೇ ಕಾರಣ!:

ಮೇಲಾಗಿ ಕೇವಲ ಎರಡು ಕಾರಣಗಳಿಂದ ಸ್ಪೀಕರ್‌ ಅವರು ಶಾಸಕರು ನೀಡಿದ ರಾಜೀನಾಮೆ ಪತ್ರವನ್ನು ತಿರಸ್ಕರಿಸಬಹುದು. ಒಂದು ರಾಜೀನಾಮೆ ಪತ್ರ ನಕಲಿಯಾಗಿದ್ದರೆ, ಮತ್ತೊಂದು ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡದಿದ್ದರೆ ತಿರಸ್ಕರಿಸಬಹುದು.

ಆದರೆ, ಈ ಪ್ರಕರಣದಲ್ಲಿ ಶಾಸಕರೇ ಖುದ್ದಾಗಿ ಸ್ಪೀಕರ್‌ ಕಚೇರಿಗೆ ತೆರಳಿ, ಅವರ (ಸ್ಪೀಕರ್‌) ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿ ಸ್ವೀಕೃತಿ ಪಡೆದಿದ್ದಾರೆ. ಸಾಲದೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

ಅದರರ್ಥ ಶಾಸಕರೇ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ, ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಅವರು ನೇರವಾಗಿ ಅಂಗೀಕರಿಸಬೇಕಿತ್ತು ಎಂದು ಹೇಳಿದರು.

ಕಾಂಗ್ರೆಸ್‌ ದೂರು ಊರ್ಜಿತವಲ್ಲ:

ಪಕ್ಷ ವಿರೋಧಿ ಚಟುವಟಿಕೆಗಳಿಗೆ ಪಕ್ಷಾಂತರ ಕಾಯ್ದೆ ಅನ್ವಯ ಆಗುವುದಿಲ್ಲ. ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ ತಕ್ಷಣವೇ ಶಾಸಕರ ಸ್ಥಾನದಿಂದ ಅನರ್ಹಗೊಳಿಸಬೇಕೆಂದೇನಿಲ್ಲ. ಪಕ್ಷಾಂತರ ಕಾಯ್ದೆ ಪ್ರಕಾರ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದೆಂದರೆ ಶಾಸಕ ಸ್ಥಾನವನ್ನು ಪ್ರತಿಬಂಧಿಸುವುದಾಗಿದೆ.

ಇಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವಾಗ ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಹಾಗೂ ಪ್ರತಿಬಂಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಕಾಂಗ್ರೆಸ್‌ ಮುಖಂಡರು ತಪ್ಪಾಗಿ ಅರ್ಥೈಸಿಕೊಂಡು ಶಾಸಕರನ್ನು ಅನರ್ಹಗೊಳಿಸಲು ಕೋರಿ ಸಲ್ಲಿಸಿರುವ ದೂರು ಉರ್ಜಿತವಾಗುವುದಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಪಕ್ಷಾಂತರ ಕಾಯ್ದೆ ಅನ್ವಯ ಆಗುವುದೇ ಇಲ್ಲ ಎಂದು ಹೇಳಿದರು.

ಅತೃಪ್ತ ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿರುವಾಗ, ಅದನ್ನು ಸ್ಪೀಕರ್‌ ಅವರು ಅಂಗೀಕರಿಸಬೇಕಿತ್ತು. ಆದರೆ, ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂಬ ಕಾರಣ ನೀಡಿ ಅಂಗೀಕಾರ ಪ್ರಕ್ರಿಯೆ ವಿಳಂಬ ಮಾಡುತ್ತಿರುವುದು ಕಾನೂನುಬದ್ಧವಾಗಿಲ್ಲ. ತನ್ಮೂಲಕ ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಅವರೇ ಕಾರಣವಾದಂತಾಗಿದೆ.

- ಬಿ.ವಿ.ಆಚಾರ್ಯ, ಮಾಜಿ ಅಡ್ವೋಕೇಟ್‌ ಜನರಲ್‌