ಸಾವಿರಾರು ಕೋಟಿ ರು. ನಷ್ಟದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಕಂಪನಿಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದ್ದರೂ ಇಲ್ಲಿಯವರೆಗೆ ಒಬ್ಬರೇ ಒಬ್ಬರು ಅದರ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿಲ್ಲ. ಈ ಹಿಂದೆ ಏರ್ ಇಂಡಿಯಾ ಖರೀದಿಗೆ ಆಸಕ್ತಿ ವ್ಯಕ್ತಪಡಿಸಲು ಮೇ 14 ರ ಗಡುವು ನೀಡಲಾಗಿತ್ತು. ಆಗ ಯಾರೂ ಬಾರದಿದ್ದುದರಿಂದ ಮೇ 31 ಕ್ಕೆ ಗಡುವು ವಿಸ್ತರಿಸಲಾಗಿದೆ. 

ನವದೆಹಲಿ (ಮೇ. 31):  ಸಾವಿರಾರು ಕೋಟಿ ರು. ನಷ್ಟದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಕಂಪನಿಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದ್ದರೂ ಇಲ್ಲಿಯವರೆಗೆ ಒಬ್ಬರೇ ಒಬ್ಬರು ಅದರ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿಲ್ಲ.

ಈ ಹಿಂದೆ ಏರ್ ಇಂಡಿಯಾ ಖರೀದಿಗೆ ಆಸಕ್ತಿ ವ್ಯಕ್ತಪಡಿಸಲು ಮೇ 14 ರ ಗಡುವು ನೀಡಲಾಗಿತ್ತು. ಆಗ ಯಾರೂ ಬಾರದಿದ್ದುದರಿಂದ ಮೇ 31 ಕ್ಕೆ ಗಡುವು ವಿಸ್ತರಿಸಲಾಗಿದೆ. ಆದರೆ, ಮೇ ೩೦ರವರೆಗೂ ಯಾವುದೇ ಕಂಪನಿ ಆಸಕ್ತಿ ವ್ಯಕ್ತಪಡಿಸಿಲ್ಲ. ಗಡುವನ್ನು ವಿಸ್ತರಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.

ಸರ್ಕಾರವು ಏರ್ ಇಂಡಿಯಾದಲ್ಲಿನ ಶೇ.76 ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಸಂಸ್ಥೆಯ ಮೇಲೆ ಸಾವಿರಾರು ಕೋಟಿ ರು. ಸಾಲವಿದೆ. ಮಾರಾಟ ಮಾಡಲು ನಿರ್ಧಾರ ಮಾಡಿದ ಆರಂಭದಲ್ಲಿ ಕೆಲ ಕಂಪನಿಗಳು ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ್ದವು. ಆದರೆ, ಈಗ ಎಲ್ಲವೂ ಹಿಂದೆ ಸರಿದಿವೆ. ಇನ್ನೊಂದು ದಿನದಲ್ಲಿ ಯಾರಾದರೂ ಬಿಡ್ ಸಲ್ಲಿಸಲು ಆಸಕ್ತಿ ವ್ಯಕ್ತಪಡಿಸಿದರೆ ಜೂನ್ ೧೫ಕ್ಕೆ ಪ್ರಕಟಿಸಲಾಗುತ್ತದೆ. ಯಾರೂ ಬಿಡ್ ಸಲ್ಲಿಸದಿದ್ದರೆ ‘ಬಿಳಿಯಾನೆ’ ಏರ್ ಇಂಡಿಯಾವನ್ನು ಸರ್ಕಾರವೇ ಇನ್ನುಮುಂದೆಯೂ ಹೊಟ್ಟೆಹೊರೆಯುವ ಅನಿವಾರ್ಯತೆ ನಿರ್ಮಾಣವಾಗುವ ಸಾಧ್ಯತೆಯಿದೆ.