ಇದೊಂದು ಬೆಟ್ಟದ ಮೇಲಿರುವ ಗ್ರಾಮ. ನಿತ್ಯ ಪೋಸ್ಟ್‌ಮ್ಯಾನ್ ಬರುವುದಿಲ್ಲ. ಪತ್ರಿಕೆಗಳು ಬರುವುದಿಲ್ಲ. ವಿದ್ಯುತ್ ಸರಬ ರಾಜು ಇಲ್ಲ. ಯಾವುದೇ ಮನೆಯಲ್ಲಿ ಟಿವಿ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಗ್ರಾಮವನ್ನು ತಲುಪುವುದಕ್ಕೆ ಸೂಕ್ತ ರಸ್ತೆಯೇ ಇಲ್ಲ.

ಇರುವುದು ಕಲ್ಲು ಮುಳ್ಳುಗಳಿಂದ ತುಂಬಿರುವ ಹಾದಿಯಷ್ಟೇ. ಬೇಸಿಗೆಯಲ್ಲಿ ಕಾಲಿಗೆ ಒತ್ತುವ ಕಲ್ಲುಗಳ ರಾಶಿ. ಇದು ಸಾಲದು ಎಂಬಂತೆ ಆನೆ, ಕರಡಿ ಮುಂತಾದ ಕಾಡುಪ್ರಾಣಿಗಳ ಆಕ್ರಮಣ. ಮಳೆಗಾಲದಲ್ಲಿ ಅಲ್ಲಿಗೆ ಹೋಗುವುದು ದೇವರಿಗೇ ಪ್ರೀತಿ. ಕೈಯಲ್ಲಿ ಜೀವ ಹಿಡಿದುಕೊಂಡೇ ಹೆಜ್ಜೆ ಇಡಬೇಕು. ಸುರಕ್ಷಿತವಾಗಿ ಮನೆ ಸೇರಿದರೆ ಯುದ್ಧವನ್ನೇ ಗೆದ್ದಂತೆ ನಿರಾಳತೆ. ಕಷ್ಟಪಟ್ಟು ಬೆಳೆದ ರಾಗಿ, ಅವರೆ ಕೆಲವೊಮ್ಮೆ ಕಾಡಾನೆಗಳ ಪಾಲು. ವರ್ಷದ ಕೂಳು ಕಣ್ಣೆದುರೇ ನಾಶ. ಕೈಗೆ ಬಂದ ತುತ್ತು ಬಾಯಿಗಿಲ್ಲ!

ಉಪ ಕಸುಬು ಆಡು ಸಾಕಾಣೆ. ಈ ಊರಿನ ಹೆಸರು ‘ದೊಡ್ಡಾಣೆ’. ಹೆಚ್ಚು ಕಡಿಮೆ ಇಂತಹ ದುಸ್ಥಿತಿಯ ಹಳ್ಳಿಗಳು ನಮ್ಮ ರಾಜ್ಯದಲ್ಲಿ ಸಾಕಷ್ಟಿವೆ. ಇದೇ ರೀತಿಯ ಒಂದು ದುರದೃಷ್ಟ ಗ್ರಾಮಕ್ಕೆ ಇತ್ತೀಚೆಗೆ (21.05. 2019) ಭೇಟಿ ನೀಡಿದೆ. ಕಲ್ಲು ಮುಳ್ಳುಗಳಿಂದ ಕೂಡಿದ ಸುಮಾರು 12 ಕಿ.ಮೀ ದುರ್ಗಮ ಹಾದಿಯಲ್ಲಿ ನಡೆದು ದೊಡ್ಡಾಣೆ ಗ್ರಾಮ ತಲುಪುವಷ್ಟರಲ್ಲಿ ನಿಯಮಿತವಾಗಿ ಟ್ರೆಕ್ಕಿಂಗ್ ಮಾಡುವ ನಮ್ಮ ತಂಡವೇ ಹೈರಾಣಾಗಿತ್ತು. ನಮ್ಮೆಲ್ಲರಿಗೂ ಬೆವರಿನ ಸ್ನಾನವಾಗಿತ್ತು.

ನಡೆಯಲು ಅಸಾಧ್ಯವಾದ ಕಾಲುದಾರಿಯೂ ಅಲ್ಲದ ಮಾರ್ಗವದು. ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ರಾಮಪುರ ಬಳಿಯ ಈ ದೊಡ್ಡಾಣೆ ಯುವ ಬ್ರಿಗೇಡ್ ಸ್ನೇಹಿತರ ಮೂಲಕ ನನ್ನ ಗಮನಕ್ಕೆ ಬಂದಿತು. ದೊಡ್ಡಾಣೆ ವಾಸಿಗಳು ಯಾವ ತಪ್ಪು ಮಾಡಿದ್ದಾರೆ ತಿಳಿಯದು. ಮೂಲಭೂತ ಸೌಲಭ್ಯಗಳಿಂದ ಅವರು ದಶಕಗಳಿಂದ ಸಂಪೂರ್ಣ ವಂಚಿತರು. ಕಳೆದ ಅನೇಕ ವರ್ಷಗಳಿಂದ ಅವರ ಪರಿಸ್ಥಿತಿ
ದಿನದಿಂದ ದಿನಕ್ಕೆ ಹದಗೆಡುತ್ತಲೇ ಬಂದಿದೆ.

30.11.2018 ರಂದು ಇಲ್ಲಿನ ನಿವಾಸಿಗಳು ತಮ್ಮ ಕಷ್ಟಗಳನ್ನು ಹೇಳಿಕೊಂಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದರ ಮುಖ್ಯಾಂಶ...

‘ದೊಡ್ಡಾಣೆ ಗ್ರಾಮದಲ್ಲಿ 150 ವರ್ಷಗಳಿಂದ ರೋಡಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಕರೆಂಟ್ ವ್ಯವಸ್ಥೆ ಲಭ್ಯವಿಲ್ಲ. ಬೆಟ್ಟ, ಗುಡ್ಡಗಳಲ್ಲಿ ಓಡಾಡಿ ಕೆಳಗಿನ ಮಾರ್ಟಳ್ಳಿಗೆ ಸರಕು ಸಾಮಾನುಗಳನ್ನು ತರಲು ಹೋಗಿಬರಲು 20 ಕಿ.ಮೀ. ದುರ್ಗಮ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು. ಚಿರತೆ, ಹುಲಿ, ಆನೆ ಮುಂತಾದ ಅನೇಕ ಪ್ರಾಣಿಗಳಿಂದ ತಪ್ಪಿಸಿಕೊಂಡು ಬರಬೇಕು. ನಮ್ಮ ಗ್ರಾಮದಲ್ಲಿ ಆರೋಗ್ಯ ಹದಗೆಟ್ಟರೆ ಡೋಲಿಯಿಂದ ನಾಲ್ಕು ಜನರು ಹೊತ್ತು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಮಧ್ಯ ದಾರಿಯಲ್ಲಿಯೇ ಅನೇಕರು ಸಾವನ್ನಪ್ಪಿದ್ದಾರೆ. ಹಾಗಾಗಿ ಮುಖ್ಯಮಂತ್ರಿಯವರು ಊರನ್ನು ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ನಮ್ಮನ್ನು ಸ್ಥಳಾಂತರ ಮಾಡಿ ಪ್ರತಿ ಮನೆಗೆ ಜಮೀನು ಹಾಗೂ ಹಣಕಾಸಿನ ವ್ಯವಸ್ಥೆ ಮಾಡಬೇಕು.’

ಕಷ್ಟಪಟ್ಟು ಕಾಲ್ನಡಿಗೆಯಲ್ಲೇ ಅಲ್ಲಿಗೆ ತಲುಪಿದ ನಂತರ ನಾನು ಆ ಹಳ್ಳಿಯ ಗ್ರಾಮಸ್ಥರೊಡನೆ ಆಲದ ಮರದ ಕೆಳಗೆ ಕುಳಿತು ಅವರ ಕಷ್ಟಗಳನ್ನು ಆಲಿಸಿದೆ. ನನ್ನ ಪಕ್ಕದಲ್ಲಿಯೇ ಆ ಊರಿನ ಗ್ರಾಮ ಪಂಚಾಯ್ತಿ ಸದಸ್ಯ ಮುರುಗ ಎಂಬುವರು ಕುಳಿತಿದ್ದರು. ಅವರಿಂದ ಇನ್ನಷ್ಟು ಮಾಹಿತಿ ಸಂಗ್ರಹಿಸಿದೆ. ಸರ್ಕಾರದ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನ ಕೈಗೊಂಡು ಹೊರಗಿನ ಪ್ರಪಂಚಕ್ಕೆ ಸಂದೇಶ ಕಳುಹಿಸಿದರು.

ಕೂಡಲೇ ಆ ಗ್ರಾಮವನ್ನು ತಲುಪಿದ ತಹಶೀಲ್ದಾರ್ ಮತದಾನ ಮಾಡಬೇಕೆಂದು ಮನವಿ ಮಾಡಿಕೊಂಡರೇ ಹೊರತು ಆ ಊರಿಗೆ ಬೇಕಾದ ರಸ್ತೆ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ವಿದ್ಯುತ್ ಸಂಪರ್ಕ, ವೈದ್ಯಕೀಯ ಸೇವೆ... ಇವುಗಳ ಬಗ್ಗೆ ಯಾವುದೇ ಭರವಸೆ ನೀಡಲು ಅಸಮರ್ಥರಾದರು. ಸುಮಾರು 130 ಕುಟುಂಬಗಳಿರುವ 700 ನಿವಾಸಿಗಳ ಗ್ರಾಮ ‘ದೊಡ್ಡಾಣೆ. ಇಷ್ಟು ದಿನಗಳ ಕಾಲ ಕತ್ತಲಲ್ಲೇ ಬದುಕುತ್ತಿದ್ದ ಈ ಗ್ರಾಮಸ್ಥರಿಗೆ ರೋಟರಿ ಸಂಸ್ಥೆ ಪ್ರತಿ ಮನೆಗೆ ಸೋಲಾರ್ ದೀಪಗಳನ್ನು ಅಳವಡಿಸಿದೆ. ಊರ ಹೊರಗಿರುವ ಸಿಹಿ ನೀರಿನ ಬಾವಿಯೊಂದೇ ಏಕೈಕ ನೀರಿನ ಆಸರೆ.

ನಾನು ಆ ದುರ್ಗಮ ಹಾದಿಯಲ್ಲಿ ನಡೆದು ಹೋಗುತ್ತಿದ್ದಾಗ ಗ್ರಾಮಸ್ಥರಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ, ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಈ ದಾರಿಯಲ್ಲಿ ಅವರನ್ನು ಹೇಗೆ ಕರೆದುಕೊಂಡು ಹೋಗಿ ರಕ್ಷಿಸಿಕೊಳ್ಳಬಹುದು ಎಂದು ಯೋಚಿಸಿಯೇ ಕಂಗಾಲಾದೆ. 

ದಾರಿಯಲ್ಲಿ ಸಿಕ್ಕ ಮಹಿಳೆಯರು ತಾವು ಪ್ರತಿನಿತ್ಯ ಮಾರ್ಟಳ್ಳಿಗೆ ಬಂದು ಅಲ್ಲಿ ಕೂಲಿ ಕೆಲಸ ಮಾಡಿ ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ಖರೀದಿಸಿ ಹಿಂದಿರುಗುವುದಾಗಿ ಹೇಳಿಕೊಂಡರು. ಆ ಗ್ರಾಮಸ್ಥರು ಆರೋಗ್ಯ ಕೆಟ್ಟಾಗ ತಾವು ಪಟ್ಟ ಪಾಡುಗಳನ್ನು, ತಮ್ಮವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಲಾಗದೆ ತಮ್ಮಿಂದ ಶಾಶ್ವತವಾಗಿ ದೂರವಾದಾಗ ಅನುಭವಿಸಿದ ಸಂಕಟಗಳನ್ನು, ದಾರಿ ಮಧ್ಯೆಯೇ ಹೆರಿಗೆಯಾದುದನ್ನು ಹೇಳಿಕೊಂಡಾಗ ಎಂಥವರ ಕಣ್ಣಲ್ಲೂ ಕಣ್ಣೀರು ಜಿನುಗದೆ ಇರಲಾರದು. ಅಲ್ಲಿಂದಲೇ ಸ್ಥಳೀಯ ಪಿಡಿಓ ಹಾಗೂ ತಹಶೀಲ್ದಾರ್ ಅವರ ಜೊತೆ ಮಾತನಾಡಲು ಪ್ರಯತ್ನಿಸಿದೆ. ಆದರೆ ಅವರ ಸಂಪರ್ಕ ಸಿಗಲಿಲ್ಲ.

‘ದೊಡ್ಡಾಣೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಒಂದು ಶಾಲೆಯೂ ಇದೆ. ಸುಮಾರು ೪೦ ಮಕ್ಕಳು ಅಲ್ಲಿ ಕಲಿಯುತ್ತಿದ್ದಾರೆ. ಇಡೀ ಶಾಲೆಗೆ ಒಬ್ಬರೇ ಶಿಕ್ಷಕರು. ಅವರು ಒಮ್ಮೆ 12 ಕಿ.ಮೀ ಹತ್ತಿ ಬಂದ ಮೇಲೆ ನಾಲ್ಕು ದಿನಗಳ ಕಾಲ ದೊಡ್ಡಾಣೆಯಲ್ಲಿಯೇ ಇರುತ್ತಾರೆ. ಪಾಠ ಮಾಡುತ್ತಾರೆ.

ಉಳಿದ ಮೂರು ದಿನ ತಮ್ಮ ಸ್ವಸ್ಥಾನಕ್ಕೆ ತೆರಳುತ್ತಾರೆ. ಅವರಿಗೆ ಆರೋಗ್ಯ ಕೆಟ್ಟರೆ ಅಂದು ಶಾಲೆಗೆ ರಜೆ. ಇಡೀ ಶಾಲೆಗೆ ಇರುವುದು ಎರಡೇ ಕೊಠಡಿಗಳು. ನಾನು ಆರನೇ ತರಗತಿಯ ಮಕ್ಕಳಿಗೆ ಆರರ ಮಗ್ಗಿ ಹೇಳುವಂತೆ ಕೇಳಿದಾಗ ಸರಿಯಾದ ಉತ್ತರ ಸಿಗಲಿಲ್ಲ. ಏಳನೇ ತರಗತಿ ಪೂರೈಸಿದ ಮಕ್ಕಳು ಮಾರ್ಟಳ್ಳಿ ಅಥವಾ ಮಲೆ ಮಹದೇಶ್ವರ ಬೆಟ್ಟದ ಹಾಸ್ಟೆಲ್‌ನಲ್ಲಿ ಇದ್ದು ಓದುತ್ತಿದ್ದಾರೆ.

ತರಬೇತಿ ಪಡೆದ ಓರ್ವ ನರ್ಸನ್ನಾದರೂ ನಮ್ಮ ಊರಿಗೆ ದಯಪಾಲಿಸಿ ಎಂದು ಅಲ್ಲಿಯ ಹೆಣ್ಣುಮಕ್ಕಳು ನನ್ನನ್ನು ಕೇಳಿಕೊಂಡರು. ಸುಮಾರು 12 ವರ್ಷಗಳ ಹಿಂದೆ ಬೆಟ್ಟದ ಮೇಲಿನ ಈ ದೊಡ್ಡಾಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸುಮಾರು 400 ಕಂಬಗಳು ಬಂದಿಳಿದವು. ನಂತರ ಅದು ಅಲ್ಲಿಗೇ ಸ್ಥಗಿತಗೊಂಡಿತು.

ಈ ಎಲ್ಲಾ ಕಷ್ಟಗಳ ನಡುವೆಯೂ ನಾವು ಮಲೆ ಮಹದೇಶ್ವರನ ಒಕ್ಕಲು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ದೊಡ್ಡಾಣೆಯ ಗ್ರಾಮಸ್ಥರ ವಿಶೇಷತೆ ಏನೆಂದರೆ ಹುಡುಕಿದರೂ ಕೆಟ್ಟ ಚಟಗಳಿಗೆ ದಾಸರಾದವರು ಅಲ್ಲಿ ಕಾಣಸಿಗುವುದಿಲ್ಲ. ತಂಟೆ ತಕರಾರುಗಳಾದಾಗ ಕಟ್ಟೆ ಪಂಚಾಯ್ತಿಯಲ್ಲೇ ಇತ್ಯರ್ಥವಾಗುತ್ತದೆ.

ಇಲ್ಲ, ಖಂಡಿತವಾಗಿಯೂ ‘ದೊಡ್ಡಾಣೆಯ ಸ್ಥಿತಿ ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಚುನಾವಣೆಗೆ ಮಾತ್ರ ದೊಡ್ಡಾಣೆಯ ಜನರು ನೆನಪಾಗಬಾರದು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯೂ ಸೇರಿದಂತೆ ಯಾವುದೇ ಯೋಜನೆ ದೊಡ್ಡಾಣೆಗೆ ಯಾಕೆ ಸಿಗಲಿಲ್ಲ. ಅಂದ ಹಾಗೆ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಯಡಿ ಇಲ್ಲಿನ ಪ್ರತಿ ಕುಟುಂಬಕ್ಕೆ ಅಡುಗೆ ಅನಿಲ ಸಂಪರ್ಕ ದೊರಕಿದೆ. ಆದರೆ ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಖಾಲಿಯಾದಾಗ ಅದನ್ನು ಹೊತ್ತು 12 ಕಿ.ಮೀ. ಕೆಳಗೆ ಬರಬೇಕು. ತುಂಬಿದ ಸಿಲಿಂಡರ್ ಹೊತ್ತುಕೊಂಡು 12 ಕಿ.ಮೀ. ಬೆಟ್ಟ ಹತ್ತಬೇಕು!

ದೊಡ್ಡಾಣೆಯಲ್ಲಿ ನಾವು ಮಾತನಾಡುತ್ತಾ ಕುಳಿತಾಗಲೇ ಓರ್ವ ಮಹಿಳೆ ಕೆಳಗಿನಿಂದ ತಲೆಯ ಮೇಲೆ ಅಕ್ಕಿ ಮೂಟೆ ಹೊತ್ತು ಉಸ್ಸಪ್ಪ ಎಂದು ಕುಳಿತರು. ಗ್ರಾಮೀಣಾಭಿವೃದ್ಧಿ ಇಲಾಖೆ, ಪಿಡಿಓ ಎಲ್ಲರೂ ಇದ್ದಾರೆ. ಆದರೆ ದೊಡ್ಡಾಣೆಯ ಪಾಲಿಗೆ ಯಾರೂ ಇಲ್ಲ. ಜಿಲ್ಲಾಧಿಕಾರಿ, ಸಿಇಓ, ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಅಥವಾ ಉಸ್ತುವಾರಿ ಸಚಿವರು ಯಾರಾದರೂ ಗ್ರಾಮ ವಾಸ್ತವ್ಯ ಮಾಡಿದರೆ ಅವರ ಸಂಕಟಗಳು ಅರ್ಥವಾಗಿ ಪರಿಹಾರ ದೊರಕಿಸಬಹುದೇನೋ?

ಈ ಊರಿಗೊಬ್ಬ ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ಊರಿನ ಜನರ ಜಮೀನುಗಳಿಗೆ ಎಲ್ಲಾ ರೀತಿ ದಾಖಲೆಗಳಿವೆ. ಶಾಲೆಯೂ ಇದೆ. ಇಷ್ಟೆಲ್ಲಾ ಇದ್ದ ಮೇಲೆ ಈ ಗ್ರಾಮಕ್ಕೆ ಓಡಾಡಲು ಕನಿಷ್ಠ ಮೋಟರೆಬಲ್ ರೋಡ್, ವಾಹನಗಳು ಚಲಿಸುವ ಕನಿಷ್ಠ ವ್ಯವಸ್ಥೆ ಮಾಡಬೇಕು ಎಂಬ ವಿವೇಕ ಸರ್ಕಾರಕ್ಕೆ ಏಕೆ ಬಂದಿಲ್ಲ? ಒಂದೇ ಪುಣ್ಯವೆಂದರೆ ಆಶಾ ಕಾರ್ಯಕರ್ತೆಯರ ಮೂಲಕ ಇಲ್ಲಿನ ಎಲ್ಲಾ ಮಕ್ಕಳಿಗೂ ಸಕಾಲದಲ್ಲಿ ಪಲ್ಸ್ ಪೋಲಿಯೋ ಹನಿಗಳನ್ನು ಹಾಕಿಸಲಾಗುತ್ತಿದೆ.

ನನ್ನ ಈ ಪುಟ್ಟ ಭೇಟಿಯಲ್ಲಿ ದೊಡ್ಡಾಣೆಯ ಗ್ರಾಮಸ್ಥರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದೇನೆ. ಅವರ ಬಹು ಕಾಲದ ಬೇಡಿಕೆಯಾದ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು, ಸರ್ಕಾರ ನೀಡಲೇಬೇಕಾದ ಮೂಲಭೂತ ಸವಲತ್ತುಗಳ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಿದ್ದೇನೆ. ಅವರೂ ಪೂರಕವಾಗಿ ಸ್ಪಂದಿಸಿದ್ದಾರೆ.

ದೊಡ್ಡಾಣೆ ಭೇಟಿ, ಆ ಗ್ರಾಮಸ್ಥರೊಡನೆ ನಡೆಸಿದ ಮಾತುಕತೆ ನನಗೆ ಇಂಡಿಯಾ ಹಾಗೂ ಭಾರತದ ನಡುವಣ ವ್ಯತ್ಯಾಸವನ್ನು ಚುಚ್ಚಿ ತೋರಿಸಿತು. ದೊಡ್ಡಾಣೆಯಿಂದ ಹೊರಟಾಗ ಗ್ರಾಮಸ್ಥರ ಪ್ರೀತಿ, ವಿಶ್ವಾಸ ಕಣ್ತುಂಬಿಸಿತು. ಎಳನೀರು, ಉಪ್ಪು-ಖಾರ ಹಚ್ಚಿದ ಮಾವಿನಕಾಯಿಯ ಆತಿಥ್ಯ ನೀಡಿದರು. ಹಲಸಿನಕಾಯಿ ಸಾಂಬಾರು ಮುದ್ದೆ ಊಟ ಹಾಕಿ ಚೆನ್ನಾಗಿ ನೋಡಿಕೊಂಡರು. ಆದರೆ ನಾವೆಲ್ಲರೂ ಆ ಗ್ರಾಮಸ್ಥರಿಗೆ ಮಾಡಿದ ಅನ್ಯಾಯದ ಖೇದವೂ ಸೇರಿಕೊಂಡು ಮನಸ್ಸು ಭಾರವಾಯಿತು. 

- ಎಸ್. ಸುರೇಶ್ ಕುಮಾರ್, ಶಾಸಕರು, ಬೆಂಗಳೂರು