ಬೆಂಗಳೂರು :  ಕನ್ನಡದ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡಾ ಈ  ಚಾಲೆಂಜ್ ಸ್ವೀಕರಿಸಿ, ಚಲಿಸುತ್ತಿರುವ ಕಾರಿನಿಂದ ಇಳಿದು ಹಾಡು ಹೇಳುತ್ತಾ ಡಾನ್ಸ್ ಮಾಡಿದ್ದಾರೆ. ಆದರೆ ಅಪಾಯಕಾರಿ ಕೃತ್ಯ ಎಸಗಿದ್ದಕ್ಕೆ ಅವರನ್ನು ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಟ್ರೋಲ್ ಮಾಡಲಾಗಿದೆ.

ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು, ಡಾನ್ಸ್ ಮಾಡಿ ಮತ್ತೆ ಕಾರಿನಲ್ಲಿ ಕೂರುವ ಹಾಗೂ ಆ ವಿಡಿಯೋವನ್ನು ಆನ್‌ಲೈನ್‌ಗೆ ಅಪ್‌ಲೋಡ್ ವಿಚಿತ್ರ ಸಾಹಸವೊಂದು ಈಗ ವಿಶ್ವಾದ್ಯಂತ ಧೂಳೆಬ್ಬಿಸಿದೆ. ‘ಕೀಕಿ ಚಾಲೆಂಜ್’ ಎಂಬ ಯುವಕರ ಈ ಹೊಸ ಕ್ರೇಜ್ ಭಾರತ ಸೇರಿದಂತೆ ವಿವಿಧ ದೇಶಗಳ ಪೊಲೀಸರ ಚಿಂತೆಗೆ ಕಾರಣವಾಗಿದೆ. 

ಕೆನಡಾದ ಟೊರಂಟೋ ಮೂಲದ 31  ವರ್ಷದ ಸಂಗೀತ ನಿರ್ದೇಶಕ ಡ್ರೇಕ್ ಎಂಬಾತನ ‘ಕೀಕಿ ಡು ಯು ಲವ್ ಮೀ’ (ಕೀಕಿ ನೀನು ನನ್ನನ್ನು ಪ್ರೀತಿಸುತ್ತೀಯಾ?) ಎಂಬ ಹಾಡು ಜಗ್ವದಿಖ್ಯಾತಿಯಾಗಿದೆ. ಈ ಹಾಡಿಗೆ ಹಾಲಿವುಡ್‌ನ ಖ್ಯಾತ ನಟ ಶಿಗ್ಗಿ ಅವರು ಜೂ.೩೦ರಂದು ಕಾರಿನಿಂದ ಇಳಿದು ಡಾನ್ಸ್ ಮಾಡುವ ಮೂಲಕ ‘ಕೀಕಿಚಾಲೆಂಜ್’ ಶುರು ಮಾಡಿದ್ದರು. ಅದನ್ನು ನೋಡಿದ ಇತರ ಸೆಲೆಬ್ರಿಟಿಗಳು ಅನುಕರಿಸಿದ್ದರು.

ಈಗ ಈ ಸಾಹಸ ವಿಶ್ವಾದ್ಯಂತ ವೈರಲ್ ಆಗಿದೆ. ಕೆಲವು ಯುವಕರು ಕಾರಿನಿಂದ ಇಳಿದು ಡಾನ್ಸ್ ಮಾಡುವಾಗ ಲಕ್ಷ್ಯ ನೀಡಲು ಆಗದೇ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆಸಿಕೊಂಡಿದ್ದಾರೆ. ಇನ್ನು ಕೆಲವರು ರಸ್ತೆ ಗುಂಡಿಗೆ ಬಿದ್ದಿದ್ದಾರೆ. ಮತ್ತೊಂದೆಡೆ, ಮಹಿಳೆಯೊಬ್ಬರು ಡಾನ್ಸ್ ಮಾಡುತ್ತಿದ್ದಾಗ ಕಿಡಿಗೇಡಿಗಳು ಆಕೆಯ ಕೈಚೀಲವನ್ನು ಹೊತ್ತೊಯ್ದ ಪ್ರಸಂಗಗಳು ನಡೆದಿವೆ.