ನವದೆಹಲಿ (ಜ.08): ರಫೇಲ್‌ ವಿಚಾರ ಸಂಸತ್‌ ಕಲಾಪದಲ್ಲಿ ನಾಟಕೀಯ ತಿರುವುಗಳನ್ನು ಪಡೆದಿದೆ. ಇದೊಂದು ಅತ್ಯಂತ ಕ್ಲಿಷ್ಟಹಾಗೂ ಯಾರೊಬ್ಬರಿಗೂ ಸರಿಯಾದ ಅಥವಾ ಸ್ಪಷ್ಟವಾದ ಉತ್ತರವೇ ಸಿಗದ ರಾಜಕೀಯ ವಿವಾದವಾಗುತ್ತಿದೆ. ಅಷ್ಟಕ್ಕೂ ಈ ವಿವಾದದಲ್ಲಿ ಕ್ಲಿಷ್ಟಪ್ರಶ್ನೆಗಳಿಗೆ ಯಾರೂ ಉತ್ತರ ಹುಡುಕುತ್ತಿಲ್ಲ. ಬದಲಾಗಿ ವಾಕ್ಸಮರದಲ್ಲಿ ಯಾರು ಯಾರು ಗೆಲ್ಲುತ್ತಾರೆ, ಯಾರು ನೆಲಕ್ಕೆ ಬೀಳುತ್ತಾರೆ ಎಂಬ ಹಟವಾದಿತನವೇ ಹೆಚ್ಚಿದೆ. ಮುಖಾಮುಖಿ ವಾಗ್ಯುದ್ಧದಲ್ಲಿ ಗೆಲ್ಲುವವರಾರು ಎಂಬುದೇ ಕುತೂಹಲ ಮೂಡಿಸಿದೆ.

ವಿರೋಧಿಗಳು ಧೂಳೀಪಟ

ಸ್ಪರ್ಧೆಯಲ್ಲಿ ಅಂತಿಮವಾಗಿ ಯಾರು ಗೆಲ್ಲಬಹುದು? ನಿಜಕ್ಕೂ ಗೊತ್ತಿಲ್ಲ. ಆದರೆ ಈ ಬಲಪರೀಕ್ಷೆಯಲ್ಲಿ ಭಾರತ ರಾಜಕಾರಣದಲ್ಲಿ ನೂತನ ‘ಆ್ಯಂಗ್ರಿ ವುಮನ್‌’ ಒಬ್ಬರು ಉದಯವಾಗಿದ್ದಾರೆ ಎಂಬುದಂತೂ ಸ್ಪಷ್ಟ. ಅವರು ರಕ್ಷಾ ಮಂತ್ರಿ ನಿರ್ಮಲಾ ಸೀತಾರಾಮನ್‌. ಅವರ ಸ್ಥಿರವಾದ, ವೇಗವಾದ ಹಾಗೂ ಧೈರ್ಯದ ಮಾತುಗಾರಿಕೆ ಎಂಥವರನ್ನೂ ಹಿಮ್ಮೆಟ್ಟಿಸುವಂತಿದೆ.

ಅವರು ಸಂಸತ್ತಿಗೆ ಕಾಲಿಟ್ಟಾಗ ‘ಬಂದೂಕುಗಳೆಲ್ಲಾ’ ಅವರೆಡೆಗೇ ಮುಖಮಾಡಿದ್ದವು. ಆದರೆ ಅವರ ಮಾತಿನ ತೀಕ್ಷ$್ಣತೆಗೆ ವಿರೋಧಿಗಳು ಧೂಳೀಪಟವಾದರು. ಅವರ ಬೆಂಕಿಯಂತಹ ಮಾತಿನ ದಾಳಿಗೆ ಒಂದು ಕ್ಷಣ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೇ ಉಸಿರಾಡಲು ಕಷ್ಟವಾಯಿತು. ಇನ್ನೂ ವಿಶೇಷ ಎಂದರೆ, ಈ ಬಾರಿಯೂ ರಾಹುಲ್‌ ಗಾಂಧಿ ಎರಡು ಬಾರಿ ಸಂಸತ್ತಿನಲ್ಲಿ ಕಣ್ಣು ಮಿಟುಕಿಸಿದರು. ಅದರೊಂದಿಗೆ ಅವರು ಇತ್ತೀಚೆಗೆ ಸಂಪಾದಿಸಿದ್ದ ಆತ್ಮವಿಶ್ವಾಸವೂ ಕಾಣೆಯಾಯಿತು.

ನಿರ್ಮಲಾ ಗರ್ಜನೆ ಸೂಪರ್‌ಹಿಟ್‌

ಅಷ್ಟಕ್ಕೂ ನಿರ್ಮಲಾ ಸೀತಾರಾಮನ್‌ ಹೇಳಿದ್ದೇನು? ರಾಹುಲ್‌ ಗಾಂಧಿ ಸಂಸತ್ತಲ್ಲಿ ಎತ್ತಿದ್ದ ಒಂದೊಂದೇ ಪ್ರಶ್ನೆಗಳನ್ನು ಹಿಡಿದುಕೊಂಡು ಬಲವಾಗಿ ತಮ್ಮ ನಿಲುವನ್ನು ಪ್ರತಿಪಾದಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಹಣ ಮಾಡಲಾಗಲಿಲ್ಲ ಎಂದು ರಫೇಲ್‌ ಒಪ್ಪಂದವನ್ನು ಕಾಂಗ್ರೆಸ್‌ ಪೂರ್ಣಗೊಳಿಸಿಲ್ಲ ಎಂದರು. ರಫೇಲ್‌ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರಿಡುತ್ತಿದೆ ಎಂದು ಆರೋಪಿಸಿದರು.

ಅವರು ಹೇಳಿದ್ದು ಹೀಗಿತ್ತು- ‘ಭಾರತೀಯ ವಾಯುಸೇನೆಯ ಅಗತ್ಯಗಳೇನು ಎಂಬುದನ್ನು ಕಡೆಗಣಿಸಿ ಒಪ್ಪಂದವನ್ನು ಕೊನೆಗೊಳಿಸಿದಿರಿ. ಒಪ್ಪಂದಕ್ಕೆ ನೀವು ತಾರ್ಕಿಕ ಅಂತ್ಯವನ್ನೇ ನೀಡಲಿಲ್ಲ. ಕಾರಣ ಅದರಿಂದ ನಿಮಗೇನೂ ಲಾಭ ಇರಲಿಲ್ಲ.’ ಮತ್ತೆ ರಾಹುಲ್‌ ಗಾಂಧಿಯೆಡೆಗೆ ತಮ್ಮ ಬಿರುಸಿನ ವಾಗ್ಬಾಣ ಬಿಡುತ್ತಾ, ‘ಪ್ರಧಾನ ಮಂತ್ರಿಯನ್ನು ಅಪ್ಪಿಕೊಂಡ ಬಳಿಕ ನೀವು ಕಣ್ಣು ಮಿಟಿಕಿಸಿದಿರಿ, ಅದಕ್ಕೆ ಕ್ಷಮೆ ಕೇಳಿದ್ದೀರಾ? ಸಂಸತ್ತಲ್ಲಿ ಇಂತಹ ವರ್ತನೆ ಸರಿಯಲ್ಲ’ ಎಂದು ಗರ್ಜಿಸಿದರು.

ರಕ್ಷಣಾ ಮಂತ್ರಿಯ ಬೆಂಕಿ ಮಾತು ಪಂಶಪಾರಂಪರ್ಯದ ಆಡಳಿತವನ್ನು ಅಪಹಾಸ್ಯ ಮಾಡುವುದನ್ನೂ ಬಿಡಲಿಲ್ಲ. ‘ನಾನೇನೂ ರಾಜ ಪರಂಪರೆಯಿಂದ ಬಂದವಳಲ್ಲ, ಪ್ರಧಾನಿ ನರೇಂದ್ರ ಮೋದಿ ಕೂಡ ಬಡತನದ ಕುಟುಂಬದಿಂದಲೇ ಬಂದವರು. ಯಾರದ್ದೋ ಆಸರೆಯಲ್ಲಿ ಅವರು ಈ ಸ್ಥಾನಕ್ಕೆ ಏರಿದವರಲ್ಲ. ಕಷ್ಟಪಟ್ಟು ಹಂತಹಂತವಾಗಿ ಮೇಲಕ್ಕೇರಿದವರು. ನಾನೂ ಕೂಡ ಸಾಧಾರಣ ಕುಟುಂಬದಿಂದಲೇ ಬಂದವಳು’ ಎಂದು ರಾಹುಲ್‌ಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ರಾಹುಲ್‌ ಕೂಡ ಬಗ್ಗಲಿಲ್ಲ

ಆದರೆ ರಾಹುಲ್‌ ಗಾಂಧಿ ಕೂಡ ಸುಮ್ಮನಾಗಲಿಲ್ಲ. ಸೀತಾರಾಮನ್‌ ಮಾತು ಮುಗಿಸಿದ ಬಳಿಕ ಅವರೂ ಪ್ರಶ್ನೆ ಎತ್ತಿದರು. ಈ ವಾಗ್ಯುದ್ಧದಲ್ಲಿ ರಾಹುಲ್‌ ಗಾಂದಿ ಹೇಳಿದ್ದು ಹೀಗಿತ್ತು- ‘ನೀವು ಮಾತನಾಡಿದ ಎರಡೂವರೆ ಗಂಟೆಗಳಲ್ಲಿ ನಾನು ಕೇಳಿದ ಸರಳ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ. ಅನಿಲ್‌ ಅಂಬಾನಿ ಹೇಗೆ ಆಫ್‌ಸೆಟ್‌ ಕಾಂಟ್ರಾಕ್ಟ್ ಗುತ್ತಿಗೆ ಪಡೆದರು ಎಂದು ನೀವು ಹೇಳಲೇ ಇಲ್ಲ.’ ಆದರೆ ಈ ವಿವಾದದಲ್ಲಿ ಒಂದಂತೂ ಸ್ಪಷ್ಟ. ರಾಹುಲ್‌ ಗಾಂಧಿ ಸಂಸತ್‌ ಕಲಾಪಕ್ಕೆ ಅಷ್ಟೊಂದು ಸಿದ್ಧವಾಗಿರಲಿಲ್ಲ. ಅಥವಾ ನಮ್ಮ ‘ಆ್ಯಂಗ್ರಿ ವುಮೆನ್‌’ ಮಾತಿನ ತೀವ್ರತೆ ಕಂಡು ಸುಮ್ಮನಾಗಿರಬೇಕು.

ಸಹೋದ್ಯೋಗಿಗಳಿಂದ ಶ್ಲಾಘನೆ

ಸಂಸತ್ತಲ್ಲಿ ನಿರ್ಮಲಾ ಸೀತಾರಾಮನ್‌ ಅವರ ಉರಿಯುವ ಸ್ಫೋಟಕ ಮಾತಿಗೆ ಅವರ ಸಹೋದ್ಯೋಗಿಗಳ ಪ್ರಚೋದನೆಯೂ ಜೋರಾಗಿತ್ತು. ಸ್ವತಃ ಮೋದಿ ಕೂಡ ಟ್ವೀಟ್‌ ಮಾಡಿ ‘ಸಂಸತ್ತಿನಲ್ಲಿ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರ ರಫೇಲ್‌ ಕುರಿತಾದ ಮಾತು ಕಾಂಗ್ರೆಸ್‌ನ ಸುಳ್ಳು ಪ್ರಚಾರವನ್ನು ನಾಶಪಡಿಸಿದೆ’ ಎಂದು ನಿರ್ಮಲಾ ಸೀತಾರಾಮನ್‌ ಅವರ ಬೆಂಕಿಯಂತಹ ಮಾತಿನ ವಿಡಿಯೋದ ಲಿಂಕ್‌ ಕೂಡ ಲಗತ್ತಿಸಿದ್ದರು. ಹಣಕಾಸು ಸಚಿವ ಅರುಣ್‌ ಜೇಟ್ಲಿ ಟ್ವೀಟ್‌ ಮಾಡಿ ‘ ವೆಲ್‌ಡನ್‌ ನಿರ್ಮಲಾ ಸೀತಾರಾಮನ್‌ ಜೀ, ಸುಳ್ಳು ಪ್ರಚಾರವನ್ನು ನೀವು ಧ್ವಂಸ ಮಾಡಿದ್ದೀರಿ. ನಿಮ್ಮ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ’ ಎಂದಿದ್ದರು.

ನಿರ್ಮಲಾ ತಮ್ಮೆದುರಿಗಿದ್ದ ಸವಾಲನ್ನು ಧೈರ್ಯದಿಂದ ಸ್ವೀಕರಿಸಿದ್ದರು. ವಿರೋಧಿಗಳನ್ನು ಸಿಂಹದಂತೆ ಎದುರಿಸಿದರು. ಸರಿಯಾದ ಸಮಯದಲ್ಲಿ, ಸರಿಯಾದ ತೀಕ್ಷ$್ಣತೆಯೊಂದಿಗೆ ಎದುರಾಳಿಗಳಿಗೆ ಸರಿಯಾದ ಪೆಟ್ಟು ಕೊಟ್ಟರು. ಸದ್ಯದ ಪುರುಷ ಪ್ರಪಂಚದಲ್ಲಿ ನಿಜಕ್ಕೂ ಅವರು ‘ಆ್ಯಂಗ್ರಿ ವುಮೆನ್‌’ ಆಗಿ ಹೊರಹೊಮ್ಮಿದರು. ಇನ್ನು ಮುಂದೆ ವಿರೋಧಿಗಳು ಅವರೆದುರು ಧ್ವನಿ ಎತ್ತುವ ಮೊದಲು ಖಂಡಿತ ಮತ್ತೊಮ್ಮೆ ಯೋಚಿಸುತ್ತಾರೆ.

ಸುಚರಿತಾ ಸೇನ್‌ ಪತ್ರಕರ್ತೆ, ಐಟಿಜಿಡಿ