ಲಂಡನ್‌[ಮೇ.31]: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಸಾವಿರಾರು ಕೋಟಿ ರು. ವಂಚಿಸಿರುವ ವಜ್ಯೋದ್ಯಮಿ ನೀರವ್‌ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ಸನ್ನಿಹಿತವಾಗಿದೆ.

ಗಡೀಪಾರು ಪ್ರಕರಣ ಕುರಿತು ಗುರುವಾರ ವಿಚಾರಣೆ ನಡೆಸಿದ ಬ್ರಿಟನ್‌ನ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌, ನೀರವ್‌ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡಿದರೆ ಯಾವ ಜೈಲಿನಲ್ಲಿ ಇರಿಸಲಾಗುತ್ತದೆ ಎಂಬ ಬಗ್ಗೆ 14 ದಿನಗಳ ಒಳಗಾಗಿ ವರದಿ ನೀಡುವಂತೆ ಭಾರತ ಸರ್ಕಾರಕ್ಕೆ ಸೂಚನೆ ನೀಡಿದೆ. ಜೊತೆಗೆ ಕೋರ್ಟ್‌ ಮುಂದಿನ ವಿಚಾರಣೆಯನ್ನು ಜೂನ್‌ 27ಕ್ಕೆ ಮುಂದೂಡಿದೆ. ನೀರವ್‌ ಮೋದಿಯನ್ನು ಇರಿಸಲು ಮುಂಬೈನ ಅಥ್‌ರ್‍ರ್‌ ರೋಡ್‌ ಜೈಲ್‌ ಸೂಕ್ತ ಸ್ಥಳದಂತೆ ಕಂಡುಬರುತ್ತಿದೆ ಎಂಬ ಅಭಿಪ್ರಾಯವನ್ನೂ ಮುಖ್ಯ ಮ್ಯಾಜಿಸ್ಪ್ರೇಟ್‌ ಎಮ್ಮಾ ಆರ್ಬುಟ್ನೋಟ್‌ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಉದ್ಯಮಿ ವಿಜಯ್‌ ಮಲ್ಯ ಗಡೀಪಾರು ಸಂದರ್ಭದಲ್ಲಿ ಕೋರ್ಟ್‌ ಇದೇ ಪ್ರಶ್ನೆಯನ್ನು ಕೇಳಿತ್ತು. ಬಳಿಕ ಭಾರತ ಆರ್ಥರ್‌ ರೋಡ್‌ ಜೈಲಿನ ವಿಡಿಯೋ ದೃಶ್ಯಾವಳಿಗಳನ್ನು ಒದಗಿಸಿತ್ತು. ಒಂದು ವೇಳೆ ನೀರವ್‌ ಮೋದಿಯನ್ನು ಅದೇ ಜೈಲಿನಲ್ಲಿ ಇಡುವುದಾದರೆ ಕೋರ್ಟ್‌ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ.