ಬೆಂಗಳೂರು [ಜು.1] :  ಸಮ್ಮಿಶ್ರ ಸರ್ಕಾರದ ಅಸ್ಥಿರತೆ, ಮಧ್ಯಂತರ ಚುನಾವಣೆಯ ವದಂತಿಗಳ ನಡುವೆಯೇ ಆಡಳಿತಾರೂಢ ಜೆಡಿಎಸ್ ಬರುವ ಆಗಸ್ಟ್ 20 ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಾದಯಾತ್ರೆಯ ಹೊಣೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಹೆಗಲಿಗೆ ಬೀಳುವ ಸಾಧ್ಯತೆಯಿದೆ.

ಈ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನ ಆಗದಿದ್ದರೂ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯೊಂದು ಆರಂಭವಾಗಿದ್ದು, ಯಾತ್ರೆಯ ಆರಂಭದಿಂದ ಕೊನೆಯವರೆಗೂ ನಿಖಿಲ್ ಕುಮಾರಸ್ವಾಮಿಯೇ ನೇತೃತ್ವ ವಹಿಸಿ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಲ್ಲಿ ಯುವಕರನ್ನು ಪಕ್ಷದತ್ತ ಸೆಳೆಯಲು ಅನುಕೂಲವಾಗಬಹುದು ಎಂಬ ಮಾತು ಕೇಳಿಬಂದಿದೆ.

ಸದ್ಯಕ್ಕೆ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್. ವಿ.ದತ್ತ ಅವರು ಪಾದಯಾತ್ರೆಯ ರೂಪರೇಷೆಗಳನ್ನು ಸಿದ್ಧಪಡಿಸಿದ್ದು, ಅದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರೂ ಹಸಿರು ನಿಶಾನೆ ತೋರಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡಿನಿಂದ ಆರಂಭವಾಗುವ
ಯಾತ್ರೆ ದಾವಣಗೆರೆ ಜಿಲ್ಲೆ ಹರಿಹರದವರೆಗೆ ಸಾಗುವುದರಿಂದ ಒಬ್ಬ ಪ್ರಮುಖ ಹಾಗೂ ಯುವ ಮುಖಂಡ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. 

ರಾಜ್ಯ ಮಟ್ಟದ ಮುಖಂಡರು ಅಲ್ಲಲ್ಲಿ ಅವರವರ ಜಿಲ್ಲೆಗಳ ವ್ಯಾಪ್ತಿಗೆ ಬಂದಾಗ ಸೇರಿಕೊಳ್ಳಲಿ ಎಂಬ ಸಲಹೆ ಪ್ರಸ್ತಾಪವಾಗಿದೆ. ಒಟ್ಟಾರೆ ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು ಹೇಗೆ ಒಳಗೊಳ್ಳಬೇಕು, ಯಾತ್ರೆಯ ಆರಂಭದಿಂದ ಕೊನೆಯವರೆಗೂ ಯಾವ ಮುಖಂಡರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದನ್ನು ನಿರ್ಧರಿಸುವ ಸಂಬಂಧ ಶೀಘ್ರದಲ್ಲೇ ಪಕ್ಷದ ಹಿರಿಯ ಮುಖಂಡರ ಸಭೆ ಕರೆಯಲು ಉದ್ದೇಶಿಸಲಾಗಿದೆ. ಆ ಸಭೆಯಲ್ಲಿ ಎಲ್ಲವನ್ನೂ ವಿಸ್ತೃತವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಕ್ಷದ ವಿಶ್ವಸನೀಯ
ಮೂಲಗಳು ತಿಳಿಸಿವೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಾಗಲಿ, ಪ್ರಚಾರ ಸಮಿತಿ ಅಧ್ಯಕ್ಷ ದತ್ತ ಅವರಾಗಲಿ ವಯಸ್ಸು ಮತ್ತು ಆರೋಗ್ಯದ ಹಿನ್ನೆಲೆಯಲ್ಲಿ ಪಾದಯಾತ್ರೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ಮಧು ಬಂಗಾರಪ್ಪ ಅವರ ಹೆಸರು ಈ ಯಾತ್ರೆಗೆ ಪ್ರಮುಖವಾಗಿ ಕೇಳಿಬರುತ್ತಿದೆ.

ಆದರೆ, ಮಧು ಬಂಗಾರಪ್ಪ ಅವರಷ್ಟೇ ಆದರೆ ಸಾಕಾಗಲಿಕ್ಕಿಲ್ಲ. ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ ರಾಜ್ಯದಾದ್ಯಂತ ಪರಿಚಿತರಾಗಿರುವ ನಿಖಿಲ್ ಕುಮಾರಸ್ವಾಮಿ ಅವರ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೇ ಮುಂದಾಳತ್ವ ವಹಿಸುವ ಬಗ್ಗೆ ಚಿಂತನೆ ನಡೆದಿದೆ. 

ಪ್ರಜ್ವಲ್‌ಗೆ ರಾಷ್ಟ್ರೀಯ ವ್ಯವಹಾರ?: ಹಾಸನದಿಂದ ಸ್ಪರ್ಧಿಸಿ ಗೆದ್ದಿರುವ ದೇವೇಗೌಡರ ಮತ್ತೊಬ್ಬ ಮೊಮ್ಮಗ ಪ್ರಜ್ವಲ್ ರೇವಣ್ಣ ಸಮರ್ಥವಾಗಿ ಆಡಳಿತಾತ್ಮಕ ವಿಷಯಗಳನ್ನು ನಿಭಾಯಿಸುತ್ತಾರೆ. ಜೊತೆಗೆ ಹಂತ ಹಂತವಾಗಿ ಪಕ್ಷದ ರಾಷ್ಟ್ರೀಯ ವ್ಯವಹಾರಗಳನ್ನು ಅವರಿಗೆ ವಹಿಸುವ ಸಂಭವವೂ ಇದೆ. ಹೀಗಾಗಿ, ರಾಜ್ಯದಲ್ಲಿ ಪಕ್ಷ ಸಂಘಟನೆಯ ಹೊಣೆಯನ್ನು ನಿಖಿಲ್ ಕುಮಾರಸ್ವಾಮಿ ಹಂತ ಹಂತವಾಗಿ ನೀಡುವುದಕ್ಕೆ ಈ ಪಾದಯಾತ್ರೆ ಒಂದು ಪ್ರಮುಖ ಮೆಟ್ಟಿಲಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರ ಗೌಡರ ಕುಟುಂಬದಲ್ಲಿ ನಡೆಯುತ್ತಿದೆ. ಆದರೆ, ಇನ್ನೂ ಸ್ಪಷ್ಟವಾಗಿಲ್ಲ.