ಮಂಗಳೂರು[ಮಾ.05]: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಾನು ಸ್ಪರ್ಧಿಸುವುದು ಖಚಿತ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸೋಮವಾರ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕೊಟ್ಟಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸುತ್ತೇನೆ. ಅಧಿಕೃತವಾಗಿ ದೇವೇಗೌಡರು ತನಗೆ ಟಿಕೆಟ್‌ ಘೋಷಣೆ ಮಾಡಿದ್ದಾರೆ. ಮಂಡ್ಯದ ಋುಣವನ್ನು ತೀರಿಸಲು ಕೊನೆ ಉಸಿರು ಇರುವವರೆಗೂ ಪ್ರಯತ್ನಪಡುತ್ತೇನೆ. ಸುಮಲತಾ ಅಂಬರೀಷ್‌ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ತಿಳಿಸಿದರು.

ತಾನು ನಂಬಿರುವ ದೇವರು ಈಶ್ವರ, ತಮ್ಮ ಮನೆ ದೇವರು ಕೂಡಾ ಹೌದು. ಇಲ್ಲಿಗೆ ವರ್ಷದಲ್ಲಿ ಒಂದು ಬಾರಿ ಬಂದಿಲ್ಲ ಅಂದರೆ ಏನನ್ನೋ ಕಳೆದುಕೊಂಡ ಹಾಗೆ ಅನ್ನಿಸುತ್ತದೆ. ಇಂದು ಮಹಾಶಿವರಾತ್ರಿ ಕೂಡಾ. ಈ ಸಮಯದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ ಎಂದರು.

ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ನಿಖಿಲ್‌ ಕುಮಾರಸ್ವಾಮಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಜೊತೆ ಮಾತುಕತೆ ನಡೆಸಿದರು. ಬಳಿಕ ಅನ್ನಪೂರ್ಣ ಛತ್ರಕ್ಕೆ ತೆರಳಿ ಕ್ಷೇತ್ರಕ್ಕೆ ಅಗಮಿಸಿದ ಭಕ್ತರ ಜೊತೆಯಲ್ಲಿ ಸಾಮಾನ್ಯರಂತೆ ಕುಳಿತು ಊಟ ಮಾಡಿದರು. ಈ ವೇಳೆ ನಿಖಿಲ್‌ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ಫೋಟೋ ಕ್ಲಿಕ್ಕಿಸಿದರು.