ಮಾಜಿ ಮಿಸ್ ಇಂಡಿಯಾ ಹಾಗೂ ನಟಿಯೋರ್ವರು ಇದೀಗ ಮತ್ತೊಂದು ಮೀ ಟೂ ಬಾಂಬ್ ಹಾಕಿದ್ದಾರೆ.
ಮುಂಬೈ: ಮಾಜಿ ಮಿಸ್ ಇಂಡಿಯಾ ಹಾಗೂ ನಟಿ ನಿಹಾರಿಕಾ ಸಿಂಗ್, ಬಾಲಿವುಡ್ ನಿರ್ಮಾಪಕ ಭೂಷಣ್‌ಕುಮಾರ್, ತಮ್ಮ ಮಾಜಿ ಪ್ರಿಯಕರನಾದ ನಟ ನವಾಜುದ್ದೀನ್ ಸಿದ್ದಿಖಿ, ನಿರ್ಮಾಪಕ-ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದಾರೆ.
‘ನಿರ್ಮಾಪಕ ಭೂಷಣ್ ಕುಮಾರ್ ಅವರು ಒಮ್ಮೆ ನನಗೆ ಕರೆ ಮಾಡಿ ‘ಅ ನ್ಯೂ ಲವ್ ಇಸ್ಟೋರಿ’ ಎಂಬ ಸಿನಿಮಾಗೆ ಸಹಿ ಹಾಕುವಂತೆ ನನ್ನನ್ನು ತಮ್ಮ ಕಚೇರಿಗೆ ಕರೆದಿದ್ದರು. ಈ ವೇಳೆ ಸಾಂಕೇತಿಕವಾಗಿ 500 ರು.ನ 2 ನೋಟುಗಳನ್ನು ಲಕೋಟೆಯಲ್ಲಿಟ್ಟು,‘ಸೈನಿಂಗ್ ಅಮೌಂಟ್’ ಎಂದು ನೀಡಿದರು. ಅದೇ ರಾತ್ರಿ ಅವರಿಂದ ನನಗೆ ಮೊಬೈಲ್ ಸಂದೇಶ ಬಂತು. ‘ನಿನ್ನ ಬಗ್ಗೆ ಹೆಚ್ಚು ತಿಳಿಯಬೇಕು ಎಂದುಕೊಂಡಿದ್ದೇನೆ. ಒಮ್ಮೆ ಗೆಟ್‌ಟುಗೆದರ್ ಮಾಡೋಣ’ ಎಂದು ಸಂದೇಶದಲ್ಲಿತ್ತು. ಆಗ ಅದಕ್ಕೆ ಉತ್ತರಿಸಿದ ನಾನು, ‘ಸರಿ ಹಾಗಿದ್ರೆ. ಡಬಲ್ ಡೇಟ್ ಮಾಡೋಣ. ನೀವು ನಿಮ್ಮ ಹೆಂಡತಿಯನ್ನು ಕರೆತನ್ನಿ. ನಾನು ನನ್ನ ಬಾಯ್‌ಫ್ರೆಂಡ್ ಕರೆತರುವೆ’ ಎಂದು ಉತ್ತರಿಸಿದೆ. ನಂತರ ಅವರು ಯಾವತ್ತೂ ನನ್ನನ್ನು ಸಂಪರ್ಕಿಸಲಿಲ್ಲ’ ಎಂದು ನಿಹಾರಿಕಾ ಹೇಳಿದ್ದಾರೆ.
‘ಇನ್ನು 2009ರಲ್ಲಿ ನವಾಜುದ್ದೀನ್ ಸಿದ್ದಿಖಿ ಜತೆ ‘ಮೈ ಲವ್ಲಿ’ ಚಿತ್ರದಲ್ಲಿ ನಟಿಸುತ್ತಿದ್ದೆ. ಇಬ್ಬರ ನಡುವೆ ಸಲುಗೆ ಉಂಟಾಗಿತ್ತು. ಈ ವೇಳೆ ಮನೆಗೆ ಉಪಾಹಾರಕ್ಕೆ ಕರೆದ ಸಿದ್ದಿಖಿ, ನನ್ನನ್ನು ಬಿಗಿದಪ್ಪಿದರು. ಮಿಸುಕಾಡಲು ಬಿಡಲಿಲ್ಲ. ಆದರೆ ನಾನು ಸ್ವಲ್ಪ ಪ್ರತಿರೋಧ ತೋರಿ ಬಿಡಿಸಿಕೊಂಡೆ. ಮಿಸ್ ಇಂಡಿಯಾ ನನ್ನ ಹೆಂಡತಿಯಾಗಬೇಕು ಎಂಬ ಕನಸು ಕಂಡಿದ್ದೆ ಎಂದು ಈ ವೇಳೆ ಸಿದ್ದಿಖಿ ನನಗೆ ಹೇಳಿದರು. ಕೆಲಕಾಲ ನಾವು ಪ್ರೀತಿಯಲ್ಲಿ ಬಿದ್ದಿದ್ದೆವು. ಆದರೆ ನಂತರ ಬೇರೆಯಾದೆವು’ ಎಂದಿದ್ದಾರೆ ನಿಹಾರಿಕಾ.
‘ಇನ್ನು ಹಲವಾರು ನಟಿಯರಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ನಿರ್ಮಾಪಕ-ನಿರ್ದೇಶಕ ಸಾಜಿದ್ ಖಾನ್ ಒಮ್ಮೆ ನನ್ನನ್ನು ಭೇಟಿಯಾದಾಗ ‘ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತೀತಯಾ’ ಎಂದು ಭವಿಷ್ಯ ಹೇಳಿ ಮಾನಸಿಕ ವೇದನೆ ಕೊಟ್ಟಿದ್ದರು’ ಎಂದೂ ನಿಹಾರಿಕಾ ಆರೋಪಿಸಿದ್ದಾರೆ.
