ನವದೆಹಲಿ[ಏ.30]: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ 250ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಸರಣಿ ಆತ್ಮಾಹುತಿ ಬಾಂಬ್‌ ಸ್ಫೋಟಗಳ ‘ಮಾಸ್ಟರ್‌ ಮೈಂಡ್‌’ ಜಹ್ರಾನ್‌ ಹಶೀಂನಿಂದ ಪ್ರೇರಿತನಾಗಿ ಕೇರಳದಲ್ಲೂ ಅದೇ ರೀತಿ ದಾಳಿಗೆ ಸಂಚು ಹೂಡಿದ್ದ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೋಮವಾರ ಬಂಧಿಸಿದೆ. ಇದರೊಂದಿಗೆ ಸಂಭಾವ್ಯ ಅಪಾಯವೊಂದು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ರಿಯಾಜ್‌ ಎ, ಅಲಿಯಾಸ್‌ ರಿಯಾಜ್‌ ಅಬೂಬಕರ್‌ ಅಲಿಯಾಸ್‌ ಅಬು ದುಜಾನಾ (29) ಎಂಬಾತನೇ ಬಂಧಿತ. ಲಂಕಾ ದಾಳಿ ಸೂತ್ರಧಾರ ಹಶೀಂನ ಭಾಷಣ ಹಾಗೂ ವಿಡಿಯೋಗಳನ್ನು ಒಂದು ವರ್ಷಕ್ಕೂ ಹಿಂದಿನಿಂದ ನೋಡುತ್ತಾ ಬಂದಿದ್ದೆ. ಜತೆಗೆ ವಿವಾದಿತ ಇಸ್ಲಾಮಿಕ್‌ ಭಾಷಣಕಾರ ಜಾಕೀರ್‌ ನಾಯಕ್‌ ಭಾಷಣಗಳನ್ನೂ ಆಲಿಸುತ್ತಿದ್ದೆ ಎಂದು ಆತ ಎನ್‌ಐಎ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿದ್ದಾನೆ. ಕಾಸರಗೋಡು ಐಸಿಸ್‌ ಮಾಡ್ಯೂಲ್‌ ಮೂಲಕ ಕೇರಳದಲ್ಲಿ ಲಂಕಾ ರೀತಿ ದಾಳಿಗೆ ಯೋಚಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

ಸದ್ಯ ಸಿರಿಯಾದಲ್ಲಿ ಐಸಿಸ್‌ ಸಂಘಟನೆಯಲ್ಲಿದ್ದಾನೆ ಎಂದು ಹೇಳಲಾಗಿರುವ ಅಬ್ದುಲ್‌ ಖಯೂಂ ಅಲಿಯಾಸ್‌ ಅಬು ಖಾಲಿದ್‌ ಜತೆಗೆ ಆನ್‌ಲೈನ್‌ನಲ್ಲಿ ಚಾಟ್‌ ಮಾಡುತ್ತಿದ್ದೆ ಎಂದೂ ತಿಳಿಸಿದ್ದಾನೆ ಎಂದು ಎನ್‌ಐಎ ಹೇಳಿಕೆ ಬಿಡುಗಡೆ ಮಾಡಿದೆ.

ಐಸಿಸ್‌ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಳ್ಳುವ ಸಲುವಾಗಿ ಆಷ್ಘಾನಿಸ್ತಾನ ಹಾಗೂ ಸಿರಿಯಾಗೆ ಅಬ್ದುಲ್‌ ರಶೀದ್‌, ಅಶ್ಫಾಕ್‌ ಮಜೀದ್‌, ಅಬ್ದುಲ್‌ ಖಯೂಂ ಸೇರಿ 15 ಮಂದಿ ವಲಸೆ ಹೋಗಿದ್ದರು. ಅವರ ಜತೆ ನಂಟು ಹೊಂದಿದ್ದ ಸುಳಿವು ದೊರೆತ ಹಿನ್ನೆಲೆಯಲ್ಲಿ ಕಾಸರಗೋಡಿನ 2 ಕಡೆ ಹಾಗೂ ಪಾಲಕ್ಕಾಡ್‌ನ 1 ಕಡೆ ಎನ್‌ಐಎ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದರು. ಈ ವೇಳೆ ಮೂವರನ್ನು ವಶಕ್ಕೆ ಪಡೆದು ಐಸಿಸ್‌ ನಂಟು ಹಾಗೂ ಕಾರ್ಯಯೋಜನೆಗಳ ಕುರಿತು ವಿಚಾರಣೆ ನಡೆಸಿದ್ದರು. ಆ ಪೈಕಿ ರಿಯಾಜ್‌ ತನ್ನ ಸಂಚು ಬಾಯಿಬಿಟ್ಟಿದ್ದಾನೆ. ಮಿಕ್ಕ ಇಬ್ಬರ ಕುರಿತಂತೆ ವಿವರ ಲಭ್ಯವಾಗಿಲ್ಲ.