ಮೈಸೂರು, ಆಂಧ್ರಪ್ರದೇಶದ ಚಿತ್ತೂರು ಮತ್ತು ನೆಲ್ಲೂರು, ಹಾಗೂ ಕೇರಳದ ಕೊಲ್ಲಮ್ ಹಾಗೂ ಮಲ್ಲಪುರಮ್ ನ್ಯಾಯಾಲಯಗಳ ಆವರಣಗಳಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಮಧುರೈ (ನ.28): ದೇಶದ ವಿವಿದೆಡೆ ಬಾಂಬ್ ಸ್ಫೋಟ ನಡೆಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್’ಐಏ) ಹಾಗೂ ತಮಿಳುನಾಡು ಪೊಲೀಸರು ಮೂವರು ಶಂಕಿತ ಅಲ್-ಖೈದಾ ಉಗ್ರರನ್ನು ಬಂಧಿಸಿದ್ದಾರೆ.

ಬಂಧಿತರು- ಕರೀಮ್, ಆಯುಫ್ ಮತ್ತು ಅಬ್ಬಾಸ್ ಅಲಿ- ದಕ್ಷಿಣ ಭಾರತದ 6 ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಆ.1ರಂದು ಮೈಸೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಶೌಚಾಲಯದಲ್ಲಿ ಬಾಂಬ್ ಸ್ಫೋಟ ನಡೆದಿತ್ತು.

ಬಂಧಿತರು ಮೈಸೂರು, ಆಂಧ್ರಪ್ರದೇಶದ ಚಿತ್ತೂರು ಮತ್ತು ನೆಲ್ಲೂರು, ಹಾಗೂ ಕೇರಳದ ಕೊಲ್ಲಮ್ ಹಾಗೂ ಮಲ್ಲಪುರಮ್ ನ್ಯಾಯಾಲಯಗಳ ಆವರಣಗಳಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳು ಮಧುರೈನವರಾಗಿದ್ದು, ‘ಬೇಸ್ ಮೂವ್’ಮೆಂಟ್’ ಎಂಬ ಸಂಘಟನೆಗೆ ಸೇರಿದವರು ಎಂದು ಹೇಳಲಾಗಿದೆ. ಮೂವರನ್ನು ಮಧುರೈಯಲ್ಲಿ ತನಿಖೆಗೆ ಒಳಪಡಿಸಲಾಗಿದೆ. ಬಳಿಕ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಮೈಸೂರಿಗೆ ತರಲಾಗುವುದು ಎಂದು ತಿಳಿದು ಬಂದಿದೆ.

ಕಳೆದ ಏ.7ರಂದು ಚಿತ್ತೂರಿನ ನ್ಯಾಯಲಯದಲ್ಲಿ, ಜೂ.15 ರಂದು ಕೇರಳದ ಕೊಲ್ಲಮ್ ನ್ಯಾಯಾಲಯದಲ್ಲಿ, ಆ.1 ರಂದು ಮೈಸೂರು ನ್ಯಾಯಾಲಯದಲ್ಲಿ, ಸೆ.12ರಂದು ಆಂಧ್ರದ ನೆಲ್ಲೂರು ನ್ಯಾಯಾಲಯದಲ್ಲಿ, ಹಾಗೂ ನ.2 ರಂದು ಕೇರಳದ ಮಲ್ಲಪುರಮ್ ನ್ಯಾಯಾಲಯದಲ್ಲಿ ಲಘು ತೀವ್ರತೆ ಬಾಂಬ್ ಸ್ಫೋಟಗಳು ನಡೆದಿವೆ.