ನವದೆಹಲಿ(ಡಿ.04): ಓರ್ವ ಪೊಲೀಸ್ ಅಧಿಕಾರಿ ಹಾಗೂ ಯುವಕನನ್ನು ಬಲಿಪಡೆದ ಉತ್ತರ ಬುಲಂದ್ ಶಹರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ ಸಿ) ಉತ್ತರ ಪ್ರದೇಶ ಸರ್ಕಾರಕ್ಕೆ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಎನ್ಎಚ್ಆರ್ ಸಿ, ಆರೋಪಿಗಳ ವಿರುದ್ಧ ತೆಗೆದುಕೊಂಡ ಕ್ರಮ ಸೇರಿದಂತೆ ವಿಸ್ತೃತ ವರದಿ ನೀಡುವಂತೆ ಉತ್ತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದೆ.

ಅಕ್ರಮ ಕಸಾಯಿ ಖಾನೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೇ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಆರಂಭವಾದ ಕೋಮು ಸಂಘರ್ಷವನ್ನು ತಡೆಯಲು ಮುಂದಾದ ಸುಬೋಧ್ ಕುಮಾರ್ ಸಿಂಗ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ.