Asianet Suvarna News Asianet Suvarna News

ಬೆಳ್ಳಂದೂರು ಕೆರೆ: ಸರ್ಕಾರಕ್ಕೆ ಎನ್‌ಜಿಟಿ ಕಟು ಎಚ್ಚರಿಕೆ

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನಮ್ಮ ಬೆಂಗಳೂರು ಫೌಂಡೇಷನ್‌' ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಎನ್‌ಜಿಟಿ ಬುಧವಾರ ಕರ್ನಾಟಕ ಕೆರೆ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕೆಎಲ್‌ಸಿಡಿಎ)ವನ್ನು ತರಾಟೆಗೆ ತೆಗೆದುಕೊಂಡಿತು.

NGT Warns Govt Over Bellandaur Lake

ಬೆಂಗಳೂರು: ಬೆಳ್ಳಂದೂರು ಕೆರೆಗೆ ತ್ಯಾಜ್ಯ ನೀರು ಹರಿಯುವುದನ್ನು ತಕ್ಷಣ ತಡೆಯದೇ ಹೋದರೆ ಕರ್ನಾಟಕ ಸರ್ಕಾರದ ವಿರುದ್ಧವೇ ಕಠಿಣ ನಿರ್ದೇಶನ ನೀಡಬೇಕಾಗುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಎಚ್ಚರಿಕೆ ನೀಡಿದೆ. ಅಲ್ಲದೇ ಮುಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಜರಿರಬೇಕೆಂದು ಕಟ್ಟಾಜ್ಞೆ ವಿಧಿಸಿದೆ.

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನಮ್ಮ ಬೆಂಗಳೂರು ಫೌಂಡೇಷನ್‌' ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಎನ್‌ಜಿಟಿ ಬುಧವಾರ ಕರ್ನಾಟಕ ಕೆರೆ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕೆಎಲ್‌ಸಿಡಿಎ)ವನ್ನು ತರಾಟೆಗೆ ತೆಗೆದುಕೊಂಡಿತು.

‘ಕೆರೆಗಳಲ್ಲಿ ಬೆಂಕಿ ಉಂಟು ಮಾಡುತ್ತಿರುವ ವಿಶ್ವದ ಏಕೈಕ ಪ್ರಾಧಿಕಾರ ನಿಮ್ಮದು' ಎಂದು ಹೇಳಿದ ನ್ಯಾಯಾಧೀಕರಣ, ತ್ಯಾಜ್ಯ ಕೆರೆ ಸೇರುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ? ಎಂದು ಪ್ರಶ್ನಿಸಿತು. ಮುಂದೆ ಇಂತಹ ಬೆಂಕಿ ಕಾಣಿಸದಂತೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಪ್ರಾಧಿಕಾರ ಮತ್ತು ಸಂಬಂಧಿಸಿದ ಇತರ ಪ್ರಾಧಿಕಾರಗಳು ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಖುದ್ದಾಗಿ ಹಾಜರಿದ್ದು ವಿವರಣೆ ನೀಡುವಂತೆ ನಿರ್ದೇಶಿಸಿತು. ಕಳೆದ ಫೆಬ್ರವರಿ 16ರಂದು ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ವ್ಯಾಪಿಸಿದ್ದು ಈ ಕುರಿತು ನಮ್ಮ ಬೆಂಗಳೂರು ಫೌಂಡೇಶನ್‌ ಅರ್ಜಿ ಸಲ್ಲಿಸಿತ್ತು.

ಕೆಎಸ್‌ಐಐಡಿಸಿ ಪ್ರತಿವಾದಿ: ಇದೇ ವೇಳೆ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಸಲ್ಲಿಸಿದ್ದ ಅರ್ಜಿಯನ್ನು ಎನ್‌ಜಿಟಿ ಮಾನ್ಯ ಮಾಡಿತು. ಆದರೆ ತಮ್ಮನ್ನೂ ಪ್ರತಿವಾದಿಯಾಗಿಸುವಂತೆ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಜಿಟಿ ತಿರಸ್ಕರಿಸಿತು. ಪ್ರತ್ಯೇಕವಾಗಿ ಮೂಲ ಅರ್ಜಿ ಸಲ್ಲಿಕೆ ಮಾಡಲು ಬಯಸಿದ್ದ ಕಾರಣಕ್ಕಾಗಿ ಕುಪೇಂದ್ರರೆಡ್ಡಿ ಅರ್ಜಿ ತಿರಸ್ಕರಿಸಿದ ನ್ಯಾಯಾಧೀಕರಣ, ಅವರು ಸಲ್ಲಿಸಿದ್ದ ಮೂಲ ಅರ್ಜಿ ಮೇಲೆ ಪ್ರತಿವಾದಿಗಳಿಗೆ ನೊಟೀಸ್‌ ನೀಡಿತು. ಮುಂದಿನ ವಿಚಾರಣೆ ಏಪ್ರಿಲ್‌ 18ರಂದು ನಡೆಯಲಿದೆ.

ಎನ್‌ಜಿಟಿ ಆದೇಶಕ್ಕೆ ರಾಜೀವ್‌ ಚಂದ್ರಶೇಖರ್‌ ಸ್ವಾಗತ
ನಗರವನ್ನು ಹಾಳು ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ ನೀಡಿರುವ ಎಚ್ಚರಿಕೆ ಸ್ವಾಗತಾರ್ಹ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರವು ನಗರದ ಮೇಲಾಗುತ್ತಿರುವ ಶೋಷಣೆಯನ್ನು ತಡೆಯಲು ಕಿಂಚಿತ್ತೂ ಕಾಳಜಿ, ಜವಾಬ್ದಾರಿ ತೋರಿಸುತ್ತಿಲ್ಲ. ಅಧಿಕಾರಿಗಳನ್ನು ಹಾಗೂ ಸಂಬಂಧಿಸಿದ ಇಲಾಖೆಗಳನ್ನು ಹೊಣೆಗಾರರನ್ನಾಗಿಸಲು ಇದು ಸೂಕ್ತ ಸಮಯವಾಗಿದೆ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios