Asianet Suvarna News Asianet Suvarna News

ಮತ್ತೆ ಗ್ರಾಹಕರಿಗೆ ತಗುಲಲಿದೆ ವಿದ್ಯುತ್ ಶಾಕ್..!

ಮುಂದಿನ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್’ಗೆ 82 ಪೈಸೆ ಹೆಚ್ಚಳ ಮಾಡುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್’ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Next year May Hike Power Price in Karnataka

ಬೆಂಗಳೂರು (ಡಿ.12): ಮುಂದಿನ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್’ಗೆ 82 ಪೈಸೆ ಹೆಚ್ಚಳ ಮಾಡುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್’ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ವಿದ್ಯುತ್ ಉತ್ಪಾದನಾ ವೆಚ್ಚ ನಾನಾ ಕಾರಣಗಳಿಂದ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್’ಗೆ 82 ಪೈಸೆ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ, ದುಬಾರಿ ದರದಲ್ಲಿ ವಿದ್ಯುತ್ ಖರೀದಿ ಮಾಡಿ ಗ್ರಾಹಕರಿಗೆ ಪೂರೈಸುತ್ತಿರುವುದರಿಂದ 2017ರ ಅವಧಿಯಲ್ಲಿ 1080 ಕೋಟಿ ರು. ವೆಚ್ಚ ಮಾಡಲಾಗಿದೆ.

2019ರವರೆಗೆ ವಾರ್ಷಿಕ 29 ಸಾವಿರ ದಶಲಕ್ಷ ಯುನಿಟ್ ವಿದ್ಯುತ್ ಸರಬರಾಜು ಮಾಡಲು ಅಂದಾಜಿಸಿದ್ದು, ಈ ಪ್ರಮಾಣದ ವಿದ್ಯುತ್ ಖರೀದಿಸಲು 1800  ಕೋಟಿ ರು. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಇದಕ್ಕಾಗಿ ವಿದ್ಯುತ್ ದರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಲಾಗಿದೆ. ಈ ಬಾರಿ ವಿಶೇಷವಾಗಿ `ಓಪನ್ ಆಕ್ಸಿಸ್' ಪದ್ಧತಿ ಮೂಲಕ ವಿದ್ಯುತ್ ಖರೀದಿಸುವವರು ಏಕಾಏಕಿ ಬೆಸ್ಕಾಂನಿಂದ ವಿದ್ಯುತ್ ಖರೀದಿಸುವುದನ್ನು ನಿಲ್ಲಿಸುವುದರಿಂದ ಪರೋಕ್ಷವಾಗಿ ಆಗುವ ನಷ್ಟವನ್ನು ಭರ್ತಿ ಮಾಡಲು ನಿಗದಿಪಡಿಸಿರುವ ನಿರ್ದಿಷ್ಟ ಮೊತ್ತವನ್ನು (ಫಿಕ್ಸ್ಡ್ ಚಾರ್ಜರ್) ಹೆಚ್ಚಿಸಿ, ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಲು ಅವಕಾಶ ನೀಡುವಂತೆ ಪ್ರಸ್ತಾವನೆ ಮಾಡಲಾಗಿದೆ. ಈ ಮೂಲಕ ಗ್ರಾಹಕರು ಬೆಸ್ಕಾಂನಿಂದ ದೂರ ಆಗದಂತೆ ಹಿಡಿದಿಟ್ಟು ಕೊಳ್ಳಲು ಹೊಸ ಕ್ರಮ ಅನುಸರಿಸಲು ಮುಂದಾಗಿದೆ.

ಹೆಚ್ಚಾದ ಸಾಲ: ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಮತ್ತು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿರುವ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಬೆಸ್ಕಾಂ ವಿದ್ಯುತ್ ಸರಬರಾಜು ಮಾಡಲೇಬೇಕಾಗುತ್ತದೆ. ಸರ್ಕಾರ ಕೃಷಿ ಪಂಪ್ಸೆಟ್ ಸೇರಿದಂತೆ ಉಚಿತವಾಗಿ ವಿದ್ಯುತ್ ನೀಡುವ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳಿಗೆ ವಿದ್ಯುತ್ ಪೂರೈಸಲು ಕಾಲಕಾಲಕ್ಕೆ ಹಣ ನೀಡದ ಕಾರಣ ಅನಿವಾರ್ಯವಾಗಿ ಬೆಸ್ಕಾಂ ದುಬಾರಿ ದರದ ಬಡ್ಡಿಗೆ ಸಾಲ ತಂದು ವಿದ್ಯುತ್ ಪೂರೈಸುವ ಕಂಪನಿಗಳಿಗೆ ಹಣ ನೀಡುತ್ತದೆ. ಹೀಗಾಗಿ ಬೆಸ್ಕಾಂ ಸಾಲದ ಸುಳಿಯಲ್ಲಿದೆ. ಸರ್ಕಾರದ ಯಾವುದೇ ಯೋಜನೆಗಳಿಗೆ ವಾಣಿಜ್ಯ ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಹೀಗಾಗಿ ಪವರ್ ಫೈನಾನ್ಸ್ ಕಾರ್ಪೊರೇಷನ್, ರೂರಲ್ ಎಲೆಕ್ಟ್ರಿಫಿಕೇಶನ್ -ಫೈನಾನ್ಸ್ ಕಂಪನಿಯಿಂದ ಶೇ.12-13ರ ಬಡ್ಡಿ ದರದಲ್ಲಿ ಸಾಲ ತಂದು ಯೋಜನೆ ಜಾರಿ ಮಾಡುವಂತಹ ಸ್ಥಿತಿ ಇದೆ. ಹೀಗಾಗಿ ಸುಮಾರು 930 ಕೋಟಿ ರು. ಸಾಲದ ಹೊರೆ ಬೆಸ್ಕಾಂ ಮೇಲೆ ಇದೆ ಎಂದು ಮೂಲಗಳು ತಿಳಿಸಿವೆ. ಸಲ್ಲಿಸಿರುವ ಪ್ರಸ್ತಾವನೆಯನ್ನು ಅಂಗೀಕರಿಸಿದ ನಂತರ ಕೆಇಆರ್ಸಿ –ಫೆಬ್ರವರಿಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ವಿಚಾರಣೆ ನಡೆಸಿ, ಅವರ ಅಹವಾಲು ಕೇಳಿದ ನಂತರ ತನ್ನ ಅಂತಿಮ ಆದೇಶ ನೀಡಲಿದೆ. ಹೊಸ ದರಗಳು ಬರುವ ಏಪ್ರಿಲ್ ಒಂದರಿಂದ ಅನ್ವಯವಾಗಲಿವೆ.

Follow Us:
Download App:
  • android
  • ios