ಬೆಂಗಳೂರು(ಸೆ. 21): ಸುಪ್ರೀಂಕೋರ್ಟ್'ನಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ. ಕುಡಿಯೋದಕ್ಕೆ ನೀರಿಲ್ಲವೆಂದರೂ ತಮಿಳುನಾಡಿಗೆ ನೀರು ಹರಿಸಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಆದೇಶ ಪಾಲನೆ ಮಾಡಬೇಕೋ ಬೇಡವೋ ಅನ್ನೋ ಗೊಂದಲಕ್ಕೆ ಬಿದ್ದಿದೆ. ರಾಜ್ಯ ಸರ್ಕಾರದ ಮುಂದೆ ಇನ್ನೂ ಕೆಲವು ಮಾರ್ಗಗಳಿವೆ.
ರಾಜ್ಯ ಸರ್ಕಾರ ಮುಂದೇನು ಮಾಡಬಹುದು?
1) ಮರು ಪರಿಶೀಲನಾ ಅರ್ಜಿ: ತಾಂತ್ರಿಕವಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬಹುದು. ಆದ್ರೆ ಅದೇ ಪೀಠದ ಎದುರು ಅರ್ಜಿ ವಿಚಾರಣೆಗೆ ಬರುತ್ತದೆ. ಹೀಗಾಗಿ, ಅರ್ಜಿ ಪುರಸ್ಕರಿಸುವ ಸಾಧ್ಯತೆಗಳು ಭಾರೀ ಕಡಿಮೆ. ಏಕೆಂದರೆ ಸೆ.12ರಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಿ ರಾಜ್ಯ ಸರ್ಕಾರ ಈಗಾಗಲೇ ಮುಖಭಂಗ ಅನುಭವಿಸಿದೆ.
2) ಮಂಡಳಿ ವಿರುದ್ಧ ಮಾತ್ರ ಮೇಲ್ಮನವಿ: ಸದ್ಯ ಸುಪ್ರೀಂಕೋರ್ಟ್ ಆದೇಶದಂತೆ ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ಸೆ.27ರವರೆಗೆ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸಬೇಕು. ಆದ್ರೆ ನೀರು ಹರಿಸುವ ಬಗ್ಗೆ ಮೇಲ್ಮನವಿ ಸಲ್ಲಿಸಲು ಆಗಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಬೇಕಾದ್ರೆ ಪ್ರಶ್ನೆ ಮಾಡಬಹುದು.
3) ಎಲ್ಲಾ ಸಂಸದರ ರಾಜೀನಾಮೆ: ಸರ್ಕಾರದ ಮುಂದಿರುವ ಆಯ್ಕೆಗಳನ್ನ ನೋಡೋದಾದ್ರೆ ಎಲ್ಲಾ ಸಂಸದರ ರಾಜೀನಾಮೆ ಕೊಡಿಸುವುದು ಮತ್ತು ಕೇಂದ್ರದ ಮೇಲೆ ಒತ್ತಡ ಹೇರಲು ಪ್ರತಿಪಕ್ಷಗಳ ಸಹಕಾರ ಕೋರಿ ಒಗ್ಗಟ್ಟು ಪ್ರದರ್ಶಿಸುವುದು ಸರ್ಕಾರದ ಮುಂದಿರುವ ಆಯ್ಕೆ. ಜೊತೆಗೆ ತಕ್ಷಣ ಅಸೆಂಬ್ಲಿ ಕರೆದು ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ನಿರ್ಣಯ ಕೈಗೊಳ್ಳುವುದು ಮತ್ತೊಂದು ಆಪ್ಷನ್ ಆದ್ರೆ ಆದೇಶ ಪಾಲನೆ ಕಷ್ಟ ಎಂದು ಸಾಮೂಹಿಕ ರಾಜೀನಾಮೆ ಸಲ್ಲಿಸಿ ರೈತರ ಪರವಾಗಿ ನಿಲುವುದು ಸರ್ಕಾರದ ಮುಂದಿರುವ ಆಯ್ಕೆಗಳಾಗಿವೆ..
ಸುಪ್ರೀಂ ಕೋರ್ಟ್'ನ ಆದೇಶದ ಹಿನ್ನೆಲೆಯಲ್ಲಿ ಚರ್ಚಿಸಲು ಸಿಎಂ ಇಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾಣ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಸಂಜೆ ಪ್ರತಿಪಕ್ಷಗಳ ನಾಯಕರು ಮತ್ತು ಸಂಸದರ ಸಭೆ ಕರೆದಿದ್ದಾರೆ. ಇಂದು ನಡೆಯುವ ಸಂಪುಟ ಸಭೆಯಲ್ಲಿ ಕಾನೂನು ಹೋರಾಟದ ಜೊತೆಗೆ ರಾಜಕೀಯ ನಡೆ ಹೇಗಿರಬೇಕು ಎಂಬ ಕುರಿತಂತೆ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಕಳೆದ ಬಾರಿ ನಡೆದ ಸಂಪುಟ ಸಭೆಯಲ್ಲಿ ಕೋರ್ಟ್ ಆದೇಶ ಪಾಲಿಸಲು ನಿರ್ಧರಿಸಲಾಗಿತ್ತು. ಆದ್ರೆ ಸರ್ಕಾರ ಈಗ ಏನು ಮಾಡುತ್ತೆ ಅನ್ನೋದೇ ಕುತೂಹಲ. ಈಗಾಗಲೇ ಕೋರ್ಟ್ ಆದೇಶದಂತೆ ನೀರು ಹರಿಸಿ ಕೆಆರ್ಎಸ್ ಜಲಾಶಯದಲ್ಲಿ ನೀರು ಬರಿದಾಗಿದೆ. ಸರ್ಕಾರಕ್ಕೆ ಈ ಭಾರೀ ಧರ್ಮ ಸಂಕಟ ಎದುರಾಗಿದೆ. ರಾಜ್ಯ ಸರ್ಕಾರದ ಮುಂದೆ ಹಲವು ಮಾರ್ಗಗಳಿವೆ. ಆದ್ರೆ ಸರ್ಕಾರ ಯಾವ ನಡೆ ಇಡಲಿದೆ ಅನ್ನೋದು ಕುತೂಹಲ ಕೆರಳಿಸಿದೆ.
- ಬ್ಯೂರೋ ರಿಪೋರ್ಟ್, ಸುವರ್ಣನ್ಯೂಸ್
