ವೆಲ್ಲಿಂಗ್ಟನ್[ಆ.22]: ನ್ಯೂಜಿಲೆಂಟ್ ಸ್ಪೀಕರ್ ಟ್ರೆವರ್ ಮಲಾರ್ಡ್ ಸಂಸತ್ತಿನಲ್ಲಿ ಸಂಸದರೊಬ್ಬರ ಮಗುವಿಗೆ ಹಾಲುಣಿಸುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಒಂದೆಡೆ ಸಂಸದ ಮಸೂದೆಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದರೆ, ಇತ್ತ ಸ್ಪೀಕರ್ ಅವರ ಮಗುವಿಗೆ ಹಾಲುಣಿಸುತ್ತಿದ್ದರು.

ಈ ಫೋಟೋವನ್ನು ಖುದ್ದು ಸ್ಪೀಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಸಾಮಾನ್ಯವಾಗಿ ಸ್ಪೀಕರ್ ಕುರ್ಚಿಯಲ್ಲಿ ಕರ್ಯದರ್ಶಿ ಕುಳಿತುಕೊಳ್ಳಬಹುದು. ಆದರೆ ಇಂದು ಈ ಸೀಟಿನಲ್ಲಿ ನನ್ನೊಂದಿಗೆ ಓರ್ವ VIP ಕುಳಿತಿದ್ದಾರೆ. ನಾನು ಟಮಾತಿ ಕಾಫೈ ಹಾಗೂ ಟಿಮ್ ಗೆ ಈ ನೂತನ ಸದಸ್ಯನಿಗಾಗಿ ಶುಭ ಕೋರುತ್ತೇನೆ' ಎಂದಿದ್ದಾರೆ.

ಈ ಫೋಟೋ ಆಗಸ್ಟ್ 21ರಂದು ಕ್ಲಿಕ್ಕಿಸಿದ್ದು, ಅಂದು ನ್ಯೂಜಿಲೆಂಡ್ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಲು ಸಂಸದ ಟಮಾತಿ ಕಾಫೈ ತನ್ನ ಪುಟ್ಟ ಕಂದನೊಂದಿಗೆ ಆಗಮಿಸಿದ್ದರು. Paternity Leave ಬಳಿಕ ಮೊದಲ ಬಾರಿ ಅವರು ಕಲಾಪದಲ್ಲಿ ಭಾಗವಹಿಸಿದ್ದರು.

ಇನ್ನು ಸ್ಪೀಕರ್ ನಡೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಇನ್ನು ಕೆಲವರು ತಂದೆಯೂ ತನ್ನ ಕೆಲಸ ನಿರ್ವಹಿಸುತ್ತಾ ಮಗುವಿನ ಆರೈಕೆ ಮಾಡುತ್ತಾನೆ ಎಂದು ಕಮೆಂಟ್ ಮಾಡಿದ್ದಾರೆ.