ಈಗಾಗಲೇ ಕಳೆದ ಆರು ತಿಂಗಳಿನಿಂದ ಡಿಆರ್‌'ಡಿಓ ವೈಮಾನಿಕ ಪರೀಕ್ಷಾ ವಲಯವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದು, ಇದೀಗ ಅಧಿಕೃತವಾಗಿ ಬಳಕೆಗೆ ಮುಕ್ತಗೊಳ್ಳಲಿದೆ.

ಬೆಂಗಳೂರು(ಮೇ.28): ಅಮೃತ್ ಮಹಲ್‌ ರಾಸುಗಳಿಗೆ ಖ್ಯಾತಿವೆತ್ತ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಇನ್ನುಮುಂದೆ ದೇಶದ ರಕ್ಷಣಾ ಕ್ಷೇತ್ರದ ವೈಮಾನಿಕ ಪರೀಕ್ಷಾ ವಲಯದಿಂದಲೂ ತನ್ನ ಹಿರಿಮೆ ಹೆಚ್ಚಿಸಿಕೊಳ್ಳಲಿದೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಾಗಿ (ಡಿಆರ್‌ಡಿಒ) ಏರೋ ನಾಟಿಕಲ್‌ ಡೆವಲೆಪ್‌'ಮೆಂಟ್‌ ಎಸ್ಟಾಬ್ಲಿಷ್‌'ಮೆಂಟ್‌ (ಎಡಿಇ) ಸಂಸ್ಥೆ ನೂತನವಾಗಿ ಸ್ಥಾಪಿಸಿರುವ ವೈಮಾನಿಕ ಪರೀಕ್ಷಾ ವಲಯ (ಏರೊನಾಟಿಕಲ್‌ ಟೆಸ್ಟ್‌ ರೇಂಜ್‌-ಎಟಿಆರ್‌) ಬೆಂಗಳೂರು ನಗರದಿಂದ 200 ಕಿ.ಮೀ. ದೂರದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿಂದು ಲೋಕಾರ್ಪಣೆಗೊಳ್ಳಲಿದ್ದು, ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಇದನ್ನು ಉದ್ಘಾಟಿಸಲಿದ್ದಾರೆ.

ಡಿಆರ್‌'ಡಿಓದ 10 ವರ್ಷಗಳ ಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ವೈಮಾನಿಕ ಪರೀಕ್ಷಾ ವಲಯವು 2.2 ಕಿ.ಮೀ. ಉದ್ದದ ರನ್‌'ವೇ, ಆರು ಅಂತಸ್ತುಗಳ ರೇಂಜ್‌ ಕಂಟ್ರೋಲ್‌ ಕೇಂದ್ರ, 2 ಮಾನವ ರಹಿತ ವಿಮಾನಗಳ ನಿಲುಗಡೆ, ರಾಡಾರ್‌ ಕೇಂದ್ರ ಮತ್ತು ಸಂಚಾರಿ ಟೆಲಿಮೆಟ್ರಿ ವ್ಯಾನ್‌'ಗಳನ್ನು ಒಳಗೊಂಡಿದೆ. ಇದಲ್ಲದೇ ಡಿಆರ್‌'ಡಿಓಗೆ ಸಂಬಂಧಿಸಿದ ತಾಂತ್ರಿಕ ಕೇಂದ್ರ, ಕೆಫೆಟೇರಿಯಾ, ಮೆಡಿಕಲ್‌ ಸೆಂಟರ್‌ ಮತ್ತು ಬಾಲವಿಹಾರ ಕೂಡ ಇಲ್ಲಿ ನಿರ್ಮಾಣಗೊಳ್ಳಲಿದ್ದು, ಸುಮಾರು 200 ಎಕರೆ ಪ್ರದೇಶದಲ್ಲಿ ಡಿಆರ್‌'ಡಿಓ ಟೌನ್‌'ಶಿಪ್‌ ಕೂಡ ಸಿದ್ಧಗೊಳ್ಳಲಿದೆ. 

ಈಗಾಗಲೇ ಕಳೆದ ಆರು ತಿಂಗಳಿನಿಂದ ಡಿಆರ್‌'ಡಿಓ ವೈಮಾನಿಕ ಪರೀಕ್ಷಾ ವಲಯವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದು, ಇದೀಗ ಅಧಿಕೃತವಾಗಿ ಬಳಕೆಗೆ ಮುಕ್ತಗೊಳ್ಳಲಿದೆ. ಡಿಆರ್‌'ಡಿಓ ವಿಜ್ಞಾನಿಗಳು ಕಳೆದ ನವೆಂಬರ್‌ನಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಈ ಮೊದಲು ರುಸ್ತುಂ-2 ಎಂದು ಗುರುತಿಸಲಾಗುತ್ತಿದ್ದ ‘ತಪಸ್‌-201' ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟವನ್ನು ಇದೇ ವೈಮಾನಿಕ ಪರೀಕ್ಷಾ ವಲಯದಲ್ಲಿ ನಡೆಸಿದ್ದಾರೆ.