ಶಿಕ್ಷಕರ ನೇಮಕಕ್ಕೆ ಹೊಸ ಷರತ್ತು

New Rules For High School Teacher Recruitment
Highlights

ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಗೆ ಇದೀಗ ಹೊಸ ರೀತಿಯ ಷರತ್ತೊಂದನ್ನು ವಿಧಿಸಿದ್ದು, ಇದೀಗ ಈ ಷರತ್ತಿನ ಬಗ್ಗೆ ಅನೇಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೊಂದು ಅವೈಜ್ಞಾನಿಕ ವಿಧಾನ ಎಂದು ಹೇಳಿದ್ದಾರೆ. 

ವಿಧಾನ ಪರಿಷತ್‌ :   ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಯಾ ಶಾಲೆಯ ಕಳೆದ ಐದು ವರ್ಷಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಿಲ್ಲಾ ಸರಾಸರಿ ಫಲಿತಾಂಶಕ್ಕಿಂತ ಉತ್ತಮವಾಗಿರಬೇಕೆಂಬ ಷರತ್ತು ಅವೈಜ್ಞಾನಿಕವಾಗಿದ್ದು, ಇಂತಹ ಷರತ್ತಿನಿಂದ ಶಾಲೆಯ ಫಲಿತಾಂಶ ಉತ್ತಮ ಬರುವ ಬದಲು ಇನ್ನಷ್ಟುಕುಸಿಯಲಿದೆ. ಹಾಗಾಗಿ ಈ ಷರತ್ತು ಹಿಂಪಡೆಯಬೇಕೆಂದು ವಿಧಾನ ಪರಿಷತ್‌ನಲ್ಲಿ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು.

ಬಿಜೆಪಿ ಸದಸ್ಯ ವಿ.ಎಸ್‌. ಸಂಕನೂರು, ಪುಟ್ಟಣ್ಣ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ಅವರು, ಇಲಾಖೆ ವಿಧಿಸಿರುವ ಷರತ್ತು ನ್ಯಾಯ ಸಮ್ಮತವಾಗಿದೆ. ಷರತ್ತಿನಿಂದ ಶೈಕ್ಷಣಿಕ ಪ್ರಗತಿ ಆಗುತ್ತದೆ. ಹೀಗಾಗಿ ಇದನ್ನು ಹಿಂಪಡೆಯುವುದಿಲ್ಲ ಎಂದು ಉತ್ತರಿಸಿದರು.

ಆದರೆ ಸಚಿವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿ.ಎಸ್‌. ಸಂಕನೂರು, ಶರಣಪ್ಪ ಮಟ್ಟೂರು, ಕೆ.ಟಿ. ಶ್ರೀಕಂಠೇಗೌಡ, ವೈ.ಎ. ನಾರಾಯಣಸ್ವಾಮಿ, ಭೋಜೇಗೌಡ ಮುಂತಾದವರು, ಷರತ್ತು ಒಂದೊಂದು ಜಿಲ್ಲೆಗೂ ಒಂದೊಂದು ರೀತಿ ಇದೆ. ಏಕ ರೂಪದಲ್ಲಿ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳು ಉಳಿದೆಲ್ಲ ವಿಷಯಗಳಲ್ಲಿ ಉತ್ತಮ ಅಂಕ ಪಡೆದು, ಕೇವಲ ಗಣಿತದಂತಹ ವಿಷಯಗಳಲ್ಲಿ ಅನುತ್ತೀರ್ಣರಾಗಿ ಶಾಲೆಯ ಒಟ್ಟಾರೆ ಫಲಿತಾಂಶ ಕಡಿಮೆಯಾದರೆ ಇಡೀ ಶಾಲೆಗೆ ಯಾಕೆ ಶಿಕ್ಷೆ ಕೊಡುತ್ತಿರಿ? ಕಡಿಮೆ ಅಂಕ ಗಳಿಕೆಗೆ ಕಾರಣರಾದ ಗಣಿತ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನು ಬಿಟ್ಟು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಅನುದಾನಿತ ಶಾಲೆ ಫಲಿತಾಂಶ ಕಡಿಮೆಯಾದರೆ ಕ್ರಮ ಕೈಗೊಳ್ಳುವ ಸರ್ಕಾರ ಸರ್ಕಾರಿ ಶಾಲೆಗಳ ಫಲಿತಾಂಶ ಕಡಿಮೆ ಬಂದರೆ ಏನೂ ಕ್ರಮ ಕೈಗೊಳ್ಳುವುದಿಲ್ಲ, ನೂರಾರು ಸರ್ಕಾರಿ ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡ ಉದಾಹರಣಗೆಗಳು ಇವೆ. ಈ ರೀತಿಯ ತಾರತಮ್ಯ ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಐಎಎಸ್‌ ಅಧಿಕಾರಿಗಳಿಗೆ ವಾಸ್ತವವಾಗಿ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವು ಇರುವುದಿಲ್ಲ, ಹಾಗಾಗಿ ಸಚಿವರೇ ಇಂತಹವುಗಳ ಬಗ್ಗೆ ತಿಳಿದುಕೊಂಡು ಆದೇಶ ವಾಪಸ್‌ ಪಡೆಯಬೇಕು ಎಂದು ಬೋಜೇಗೌಡ ಒತ್ತಾಯಿಸಿದರೆ, ನಾರಾಯಣಸ್ವಾಮಿ ಅವರು ಯಾವುದೇ ಆದೇಶ ಅಥವಾ ಬದಲಾವಣೆ ಮಾಡುವ ಮುನ್ನ ಶಿಕ್ಷಣ ತಜ್ಞರು, ಮನೋತಜ್ಞರು ಮುಂತಾದವರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದರು. ಕೆ.ಟಿ. ಶ್ರೀಕಂಠೇಗೌಡ ಅವರು ಅಧಿಕಾರಿಗಳ ಮಾತು ಕೇಳಿದರೆ ಶಿಕ್ಷಣ ವ್ಯವಸ್ಥೆ ಇನ್ನಷ್ಟುಹಾಳಾಗುತ್ತದೆ ಎಂದರು. ಐವಾನ್‌ ಡಿಸೋಜಾ ಈ ಷರತ್ತು ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ಸಭಾಪತಿ ಬಸವರಾಜ ಹೊರಟ್ಟಿಸದಸ್ಯರ ಮಾತು ಬೆಂಬಲಿಸಿ ಇದೊಂದು ಅವೈಜ್ಞಾನಿಕ ಆದೇಶವಾಗಿದೆ. ಕನ್ನಡ ಶಾಲೆಗಳಿಗೆ ಮಾರಕವಾಗಿದೆ. ಆದೇಶವನ್ನು ಮರು ಪರಿಶೀಲಿಸಿ ಎಂದು ಸಲಹೆ ನೀಡಿದರು. ಕೊನೆಗೆ ಸಚಿವ ಎನ್‌. ಮಹೇಶ್‌ ಈ ಬಗ್ಗೆ ಶಿಕ್ಷಣ ತಜ್ಞರು ಸೇರಿದಂತೆ ಎಲ್ಲರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

loader