ಬೆಂಗಳೂರು [ಜು.04] :  ಭಾಷೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಕಲೆ, ಸಂಗೀತ, ನೃತ್ಯ ಮತ್ತಿತರ ಕ್ಷೇತ್ರಗಳಲ್ಲಿ ಆಯಾ ಜಿಲ್ಲೆ, ವಿಧಾನಸಭಾ ಕ್ಷೇತ್ರವಾರು ಕಂಡುಬರುವ ಪ್ರಕಾರಗಳಲ್ಲೇ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ‘ಕರ್ನಾಟಕ ಸಂಸ್ಕೃತಿ’ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಪೋಷಣೆಗಾಗಿ ವಾರ್ಷಿಕ ಅನುದಾನ ಕೋರಿ ಇಲಾಖೆಗೆ ಆನ್‌ಲೈನ್‌ ಮೂಲಕ ನೇರ ಅರ್ಜಿ ಸಲ್ಲಿಸಲು ಪ್ರಸ್ತುತ ಇರುವ ವ್ಯವಸ್ಥೆಯಡಿ ಕೆಲ ಸಂಘ ಸಂಸ್ಥೆಗಳಿಂದ ಸುಳ್ಳು ಮಾಹಿತಿ ನೀಡಿ, ಒತ್ತಡ, ಪ್ರಭಾವ ಬೀರಿ, ಆಡಿಟ್‌, ಅಕೌಂಟ್‌ ಯಾವುದೂ ನೀಡದೆ ಅನುದಾನ ಪಡೆದಿರುವ ದುರುಪಯೋಗದ ಬಗ್ಗೆ ದೂರುಗಳು ಬಂದಿವೆ.

ಹಾಗಾಗಿ ಇಲಾಖೆಗೆ ಹೊಸ ರೂಪು ಕೊಡುವ ದೃಷ್ಟಿಯಿಂದ ಈ ನೂತನ ಕಾರ್ಯಕ್ರಮ ಜಾರಿಗೆ ಚಿಂತಿಸಲಾಗಿದೆ. ಈ ಬಗ್ಗೆ ಮುಂದಿನ 15 ದಿನಗಳ ಕಾಲ ಸಾರ್ವಜನಿಕರಿಂದ ಅಭಿಪ್ರಾಯ, ಆಕ್ಷೇಪಗಳನ್ನು ಸಂಗ್ರಹಿಸಿ ನಂತರ ಅವುಗಳ ಪರಿಶೀಲನೆ ನಡೆಸಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಕರ್ನಾಟಕ ಸಂಸ್ಕೃತಿ’ ಕಾರ್ಯಕ್ರಮ ಜಾರಿಯಾದರೆ, ಕಲಾವಿದರು, ಸಂಘ ಸಂಸ್ಥೆಗಳು, ಸಾಂಸ್ಕೃತಿಕ ತಂಡಗಳು ವಾರ್ಷಿಕ ಅನುದಾನ ಕೋರಿ ಇಲಾಖೆಗೆ ನೇರ ಅರ್ಜಿ ಸಲ್ಲಿಸಲು ಪ್ರಸ್ತುತ ಇರುವ ವ್ಯವಸ್ಥೆ ರದ್ದಾಗಲಿದೆ. ಸ್ಥಳೀಯ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರಿಗೆ ತಮ್ಮ ಜಿಲ್ಲೆ, ತಾಲ್ಲೂಕು ಅಥವಾ ವಿಧಾನಸಭಾ ಕ್ಷೇತ್ರವಾರು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅನುದಾನ ನೀಡಲು ಪರಿಗಣಿಸುವ ಅಧಿಕಾರ ದೊರೆಯಲಿದೆ ಎಂದು ತಿಳಿಸಿದರು.

ಕರಾವಳಿ, ಮಲೆನಾಡು, ಬಯಲುಸೀಮೆ, ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಸ್ಥಳೀಯವಾಗಿ ವಿಭಿನ್ನ ಸಂಸ್ಕೃತಿ, ಕಲೆ, ನಾಟಕ, ಸಂಗೀತ, ನೃತ್ಯ ಹೀಗೆ ಮತ್ತಿತರ ಸಾಂಸ್ಕೃತಿಕ, ಕಲಾ ಪ್ರಾಕಾರಗಳು ಕಂಡುಬರುತ್ತಿವೆ. ಸ್ಥಳೀಯವಾಗಿ ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ನೂತನ ಕಾರ್ಯಕ್ರಮ ಸಹಕಾರಿಯಾಗಲಿದೆ.

ಆಯಾ ಜಿಲ್ಲೆ, ತಾಲ್ಲೂಕುವಾರು ಪ್ರಚಲಿತವಿರುವ ಕಲೆ, ಸಂಸ್ಕೃತಿ ಪ್ರಕಾರಗಳ ಸ್ಪರ್ಧೆ, ಉತ್ಸವಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರವಾರ 18 ವರ್ಷದೊಳಗಿನ ಮತ್ತು 18 ವರ್ಷ ಮೇಲ್ಪಟ್ಟಯುವಕ/ಯುವತಿಯರಿಗೆ ಹಾಗೂ ಶಾಲಾ ಕಾಲೇಜು ಮಟ್ಟದಲ್ಲಿ ಪಿಯುಸಿ ವರೆಗಿನ ಮಕ್ಕಳಿಗೆ ಹಾಗೂ ಪಿಯುಸಿ ನಂತರದ ತರಗತಿ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿಕಳುಹಿಸಬೇಕು. ರಾಜ್ಯಮಟ್ಟಕ್ಕೆ ಆಯ್ಕೆಯಾದ ತಂಡಗಳಿಗೆ ಸರ್ಕಾರ ಅಂತಿಮ ಸ್ಪರ್ಧೆ ಏರ್ಪಡಿಸಿ ಗೆದ್ದವರನ್ನು ರಾಜ್ಯಮಟ್ಟದ ಪ್ರಶಸ್ತಿಗೆ ಪರಿಗಣಿಸಿ ಪ್ರಶಸ್ತಿ ಹಾಗೂ ಸೂಕ್ತ ಬಹುಮಾನ ನೀಡಿ ಪುರಸ್ಕರಿಸಲಿದೆ ಎಂದರು.