ಸಿರಿಯಾದಲ್ಲಿ ಅಲ್ಲಿನ ಸರ್ಕಾರವೇ ಮುಗ್ಧ ಜನರ ಮೇಲೆ ರಾಸಾಯನಿಕ ದಾಳಿ ನಡೆಸುತ್ತಿದ್ದರೂ ಆ ದೇಶದ ಬೆನ್ನಿಗೆ ನಿಂತಿರುವ ರಷ್ಯಾಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಠಿಣ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‌: ಸಿರಿಯಾದಲ್ಲಿ ಅಲ್ಲಿನ ಸರ್ಕಾರವೇ ಮುಗ್ಧ ಜನರ ಮೇಲೆ ರಾಸಾಯನಿಕ ದಾಳಿ ನಡೆಸುತ್ತಿದ್ದರೂ ಆ ದೇಶದ ಬೆನ್ನಿಗೆ ನಿಂತಿರುವ ರಷ್ಯಾಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಠಿಣ ಎಚ್ಚರಿಕೆ ನೀಡಿದ್ದಾರೆ. ‘ಗೆಟ್‌ ರೆಡಿ ರಷ್ಯಾ. ಏಕೆಂದರೆ ನಮ್ಮವರು ಬರುತ್ತಿದ್ದಾರೆ. ಚೆನ್ನಾಗಿ, ಹೊಸ ರೀತಿಯಲ್ಲಿ, ಅದ್ಭುತವಾಗಿ ಬರುತ್ತಿದ್ದಾರೆ! ತನ್ನದೇ ಜನರನ್ನು ಗ್ಯಾಸ್‌ ಹಾಯಿಸಿ ಕೊಲ್ಲುವ ಹಾಗೂ ಅದನ್ನು ಆನಂದಿಸುವ ಪ್ರಾಣಿಯ ಜೊತೆ ನೀವು ನಿಲ್ಲಬಾರದು’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ ಉಭಯ ದೇಶಗಳ ನಡುವಿನ ಸಂಬಂಧ ಶೀತಲ ಸಮರದ ಸಮಯಕ್ಕಿಂತಲೂ ವಿಷಮಗೊಂಡಿದೆ ಎನ್ನುವ ಮೂಲಕ ಟ್ರಂಪ್‌, ಸಂಭವನೀಯ ಯುದ್ಧದ ಮುನ್ಸೂಚನೆ ನೀಡಿದ್ದಾರೆ. ತನ್ನ ಮಾಜಿ ರಾಯಬಾರಿ ಮತ್ತು ಆತನ ಪುತ್ರಿ ಮೇಲೆ ರಷ್ಯಾದ ಏಜೆಂಟ್‌ಗಳು ಬ್ರಿಟನ್‌ನಲ್ಲಿ ವಿಷಾನಿಲ ದಾಳಿ ನಡೆಸಿದ ಪ್ರಕರಣ, ಇತ್ತೀಚೆಗೆ ರಷ್ಯಾದ ವಿರುದ್ಧ ಅಮೆರಿಕ ಮತ್ತು ಯುರೋಪಿಯನ್‌ ದೇಶಗಳು ತಿರುಗಿ ಬೀಳುವಂತೆ ಮಾಡಿತ್ತು. ಅದರ ಬೆನ್ನಲ್ಲೇ, ಇದೀಗ ಸಿರಿಯಾ ವಿಷಯ ಅಮೆರಿಕ ಮತ್ತು ರಷ್ಯಾ ನಡುವೆ ಸಮರಕ್ಕೆ ನಾಂದಿ ಹಾಡಿದೆ.

ವಿಷಾನಿಲ ದಾಳಿ: ಕಳೆದ ಶನಿವಾರ ಸಿರಿಯಾದ ಡಮಾಸ್ಕಸ್‌ ಬಳಿ ರಾಸಾಯನಿಕ ದಾಳಿ ನಡೆದು 40 ಮಂದಿ ಮೃತಪಟ್ಟಾಗ ಅಮೆರಿಕದ ಅಧ್ಯಕ್ಷ ಟ್ರಂಪ್‌ ಆ ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದರು. ಆದರೆ, ರಾಸಾಯನಿಕ ದಾಳಿಯೇ ನಡೆದಿಲ್ಲ ಎಂದು ಸಿರಿಯಾ ಮತ್ತು ಅದರ ಸ್ನೇಹಿತ ರಾಷ್ಟ್ರ ರಷ್ಯಾ ಹೇಳಿದ್ದವು.

ರಷ್ಯಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಿರಿಯಾದತ್ತ ಅಮೆರಿಕದ ಯಾವುದೇ ಕ್ಷಿಪಣಿ ಬಂದರೂ ಹೊಡೆದುರುಳಿಸುತ್ತೇವೆ. ಯುದ್ಧಪೀಡಿತ ಸಿರಿಯಾದಲ್ಲಿ ಒಬ್ಬನೇ ಒಬ್ಬ ರಷ್ಯನ್‌ಗೆ ಗಾಯವಾದರೂ ಟ್ರಂಪ್‌ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿತ್ತು. ಇದಕ್ಕೆ ಟ್ರಂಪ್‌ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಅದರೊಂದಿಗೆ ಜಗತ್ತಿನ ಎರಡು ಬಲಾಢ್ಯ ಮಿಲಿಟರಿ ಶಕ್ತಿಗಳ ನಡುವೆ ಸಿರಿಯಾದಲ್ಲಿ ಸಮರಕ್ಕೆ ವೇದಿಕೆ ಸಿದ್ಧವಾದಂತೆ ಕಾಣಿಸುತ್ತಿದೆ ಎಂದು ಸಮರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿರಿಯಾದಲ್ಲಿ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಜನರು ದಂಗೆಯೆದ್ದಿದ್ದು, ಅವರನ್ನು ಹತ್ತಿಕ್ಕಲು ಸರ್ಕಾರ ಕೆಲ ತಿಂಗಳುಗಳಿಂದ ಅಮಾನವೀಯ ರಾಸಾಯನಿಕ ದಾಳಿ ನಡೆಸುತ್ತಿದೆ. ಇಂತಹ ಹಲವಾರು ದಾಳಿಗಳಲ್ಲಿ ನೂರಾರು ಜನರು ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆ.