ವರ್ಷಕ್ಕೆ ಎರಡು ಬಾರಿ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್‌) ಆಯೋಜಿಸುವ ನಿರ್ಧಾರವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮರುಪರಿಶೀಲಿಸುವ ಸಾಧ್ಯತೆ ಇದೆ.

ನವದೆಹಲಿ: ವರ್ಷಕ್ಕೆ ಎರಡು ಬಾರಿ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್‌) ಆಯೋಜಿಸುವ ನಿರ್ಧಾರವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮರುಪರಿಶೀಲಿಸುವ ಸಾಧ್ಯತೆ ಇದೆ.

ನೀಟ್‌ ಪರೀಕ್ಷೆಯನ್ನು ವರ್ಷದಲ್ಲಿ ಎರಡು ಬಾರಿ ನಡೆಸುವುದರಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಹೊರೆ ಆಗಲಿದೆ ಎಂದು ಆರೋಗ್ಯ ಸಚಿವಾಲಯ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಆನ್‌ಲೈನ್‌ ಮೂಲಕ ಪರೀಕ್ಷೆ ಆಯೋಜಿಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೊಂದರೆ ಅನುಭವಿಸಲಿದ್ದಾರೆ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿತ್ತು. ಈ ಕುರಿತು ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ ಎಂದು ಮೂಲಗಳು ತಿಳಿಸಿವೆ.

ವೈದ್ಯಕೀಯ, ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಹೊಸದಾಗಿ ರಚಿಸಿರುವ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ)ಯಿಂದ ವರ್ಷದಲ್ಲಿ ಎರಡು ಬಾರಿ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಕಳೆದ ತಿಂಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದರು. ಒಂದು ಪರೀಕ್ಷೆ ಫೆಬ್ರವರಿಯಲ್ಲಿ ಇನ್ನೊಂದು ಪರೀಕ್ಷೆ ಮೇನಲ್ಲಿ ನಡೆಯಲಿದೆ. ಎರಡೂ ಪರೀಕ್ಷೆಗಳ ಪೈಕಿ ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದಿದೆಯೋ ಅದನ್ನು ಪರಿಗಣಿಸಲಾಗುತ್ತದೆ ಎಂದಿದ್ದರು.