ಕನ್ನಡದ ನೀರ್ ದೋಸೆ ಚಲನಚಿತ್ರದ ನಿರ್ಮಾಪಕನನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ವಂಚನೆ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ.
ಬೆಂಗಳೂರು : ಚಲನಚಿತ್ರ ನಿರ್ಮಾಣ ಸಲುವಾಗಿ ತಮ್ಮ ಮನೆಯ ಭೂ ದಾಖಲೆಗಳ ಕಲರ್ ಜೆರಾಕ್ಸ್ ಪ್ರತಿ ಸಲ್ಲಿಸಿ ಒಂದೇ ಬಾರಿಗೆ ಎರಡು ಬ್ಯಾಂಕ್‌ಗಳು ಹಾಗೂ ಚಿಟ್‌ಫಂಡ್‌ನಲ್ಲಿ ಸಾಲ ಪಡೆದು ವಂಚಿಸಿದ ಆರೋಪದ ಮೇರೆಗೆ ನೀರ್‌ದೋಸೆ ಸಿನಿಮಾದ ನಿರ್ಮಾಪಕ, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಬ್ಬಣ್ಣ ಗಾರ್ಡನ್ ನಿವಾಸಿ ಆರ್.ಪ್ರಸನ್ನ ಬಂಧಿತರಾಗಿದ್ದು, ಆತನಿಂದ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. 2015ರಲ್ಲಿ ಶೇಷಾದ್ರಿಪುರದ ಶಾಖೆಯ ಸಿಂಡಿಕೇಟ್ ಬ್ಯಾಂಕ್‌ಗೆ ಮನೆ ಅಡಮಾನವಿಟ್ಟು ಪ್ರಸನ್ನ ಸಾಲ ಪಡೆದಿದ್ದ. ಆ ದಾಖಲೆಗಳನ್ನು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿತು. ಈ ಬಗ್ಗೆ ಶೇಷಾದ್ರಿಪುರ ಠಾಣೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ದಾಶಿಕಾ ರಮೇಶ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ವಿಜಯನಗರದ ಸುಬ್ಬಣ್ಣ ಗಾರ್ಡನ್ ಪ್ರಸನ್ನ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ನೀರ್‌ದೋಸೆ, ಬ್ಯೂಟಿಫುಲ್ ಮನಸುಗಳು ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. 2015ರಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಅವರು ಮುಂದಾಗಿ ದ್ದರು. ಆಗ ಹೊಸಹಳ್ಳಿಯಲ್ಲಿರುವ ತಮ್ಮ ಒಡೆತನದ ಮನೆಯನ್ನು ಅಡಮಾನವಿಟ್ಟು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ನಿರ್ಧರಿಸಿದ್ದರು. ಅದರಂತೆ ಆ ಮನೆಯ ಭೂ ದಾಖಲೆಗಳನ್ನು ಕಲರ್ ಜೆರಾಕ್ಸ್ ಮಾಡಿಸಿಕೊಂಡ ಆರೋಪಿ, ಆ ದಾಖಲೆಗಳನ್ನು ಅಸಲಿ ಎಂದು ಹೇಳಿ ಸುಮಾರು .1 ಕೋಟಿ ಸಾಲ ಪಡೆದು ಬ್ಯಾಂಕ್‌ಗಳಿಗೆ ವಂಚಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಒಂದೇ ವಾರದೊಳಗೆ ಶೇಷಾದ್ರಿಪುರದ ಸಿಂಡಿಕೇಟ್ ಬ್ಯಾಂಕ್ ಶಾಖೆ ಹಾಗೂ ಕಿಲಾರಿ ರಸ್ತೆಯ ದೈವಜ್ಞ ಕೋ ಆಪರೇಟಿವ್ ಸೊಸೈಟಿಯಲ್ಲಿ ತಲಾ .38 ಲಕ್ಷ ಹಾಗೂ ಮಾರ್ಗದರ್ಶಿ ಚಿಟ್ಸ್‌ನಲ್ಲಿ .20 ಲಕ್ಷ ಸಾಲ ಪಡೆದಿದ್ದರು. ಅಂದು ಸಿಂಡಿ ಕೇಟ್ ಬ್ಯಾಂಕಿನ ಅಧಿಕಾರಿಗಳು, ಪ್ರಸನ್ನ ಸಲ್ಲಿಸಿದ್ದ ಭೂ ದಾಖಲೆಗಳನ್ನು ಪರಿಶೀಲಿಸಿದಾಗ ಅದೇ ದಾಖಲೆಗಳನ್ನು ಅಡಮಾನವಿಟ್ಟು ದೈವಜ್ಞ ಸೊಸೈಟಿಯಲ್ಲಿ ಸಹ ಸಾಲ ಪಡೆದಿರುವ ಸಂಗತಿ ಗೊತ್ತಾಗಿದೆ.
ತಕ್ಷಣವೇ ಆರೋಪಿಗೆ ಕರೆ ಮಾಡಿದ ಬ್ಯಾಂಕ್ ಅಧಿಕಾರಿಗಳು, ಬ್ಯಾಂಕ್ ವಂಚಿಸಿರುವ ಬಗ್ಗೆ ಪ್ರಶ್ನಿಸಿದ್ದರು. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ನೀಡುವುದಾಗಿ ಅವರು ಎಚ್ಚರಿಸಿದ್ದರು. ಆಗ ಪ್ರಸನ್ನ, ತಾನು ಪಡೆದಿರುವ ಸಾಲವನ್ನು ಮರಳಿ ಸುವುದಾಗಿ ಹೇಳಿ ಎರಡು ಕಂತಿನಲ್ಲಿ .17 ಲಕ್ಷ ಸಾಲ ಮರು ಪಾವತಿಸಿದ್ದ. ಆದರೆ ಇನ್ನುಳಿದ .17 ಲಕ್ಷ ಮರಳಿಸದೆ ಆರೋಪಿ ಮಾತು ತಪ್ಪಿದ್ದ. ಕೊನೆಗೆ ಮೂರು ವರ್ಷಗಳ ಬಳಿಕ ಪೊಲೀಸರಿಗೆ ಬ್ಯಾಂಕಿನ ವ್ಯವಸ್ಥಾಪಕರು ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ.
