ನವದೆಹಲಿ[ಫೆ.24]: ಭಾರತ- ಪಾಕ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಭಾರತ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 10 ಸಾವಿರ ಯೋಧರನ್ನು ರವಾನಿಸಲು ಆದೇಶಿಸಿದೆ. ಇದು ಕಾಶ್ಮೀರಲ್ಲಿ ನಾನಾ ವದಂತಿಗಳಿಗೆ ಕಾರಣವಾಗಿದೆ. ಪುಲ್ವಾಮಾದಲ್ಲಿ 40 ಯೋಧರು ಹುತಾತ್ಮರಾಗಿದ್ದಕ್ಕೆ ಪ್ರತಿಯಾಗಿ ಭಾರತ, ಪಾಕ್ ಮೇಲೆ ದಾಳಿ ನಡೆಸಬಹುದು ಎಂಬ ವದಂತಿಗಳ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ.

ಯಾವ ಕಾರಣಕ್ಕಾಗಿ ಹೆಚ್ಚುವರಿ ಯೋಧರನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಬಹಿರಂಗಪಡಿಸಿಲ್ಲ. ಆದರೆ ತಕ್ಷಣಕ್ಕೆ ಸಿಆರ್ ಪಿಎಫ್‌ನ 11 ತುಕಡಿ, ಬಿಎಸ್‌ಎಫ್‌ನ 35 ಮತ್ತು ಸಶಸ್ತ್ರ ಸೀಮಾ ದಳ, ಇಂಡೋ ಟಿಬೆಟಿಯನ್ ಗಡಿ ಪಡೆಯ ತಲಾ 10 ತುಕಡಿಗಳನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಪ್ರತಿ ತುಕಡಿಯಲ್ಲಿ 1000 ಯೋಧರು ಇರಲಿದ್ದು, ಅದರಂತೆ 100 ತುಕಡಿಗಳ ಮೂಲಕ 10 ಸಾವಿರ ಯೋಧರನ್ನು ಸರ್ಕಾರ ರವಾನಿಸಿದೆ.