ಪಾಟ್ನಾ :  ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಪಕ್ಷಗಳು ಭಾರೀ ಸಿದ್ಧತೆಯಲ್ಲಿ ತೊಡಗಿವೆ. ಇದೇ ವೇಳೆ ಎನ್ ಡಿಎ ಒಕ್ಕೂಟಗಳು 2019ನೇ ಸಾಲಿನ ಲೋಕಸಭಾ ಚುನಾವಣೆಗೆ ತನ್ನ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. 

ಬಿಹಾರದಲ್ಲಿ ಸೀಟು ಹಂಚಿಕೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು, ಬಿಜೆಪಿಯು 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಇನ್ನು ಜೆಡಿಯು 12 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಲೋಕ ಜನಶಕ್ತಿ ಪಾರ್ಟಿ ಐದು ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. 

ಇನ್ನು ಇಲ್ಲಿ ರಾಷ್ಟ್ರೀಯ ಲೋಕಸಮತಾ ಪಕ್ಷವು ಎನ್ ಡಿಎ ಭಾಗವಾಗಿಯೇ ಸ್ಪರ್ಧೆ ಮಾಡಲಿದೆ.  2 ಸ್ಥಾನಗಳನ್ನು ಈ ಪಕ್ಷಕ್ಕೆ ಬಿಜೆಪಿ ಬಿಟ್ಟುಕೊಟ್ಟಿದೆ. ಇನ್ನು ಪಕ್ಷ ಮುಖಂಡ  ಉಪೇಂದ್ರ ಕುಶ್ವಾಹ ಅವರು ಈ ಹಿಂದೆ  ಪ್ರಧಾನಿ ಮೋದಿ ಅವರಿಗೆ ನೆರವು ನೀಡಲು ಪ್ರತೀ ಕ್ಷೇತ್ರದಲ್ಲಿಯೂ ಕೂಡ ಮತಗಳನ್ನು ಪಡೆಯಲು ಕಾರ್ಯ ನಿರ್ವಹಿಸುವುದಾಗಿ ಹೇಳಿದ್ದರು. 

ಇನ್ನು ಬಿಜೆಪಿ ಉತ್ತರ ಪ್ರದೇಶ ಹಾಗೂ ಜಾರ್ಖಂಡ್ ನಲ್ಲಿ ತಲಾ ಒಂದು ಸ್ಥಾನವನ್ನು ಜೆಡಿಯುಗೆ ಬಿಟ್ಟು ಕೊಡಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಹಾಗೂ ಜೆಡಿಎಯು ಮುಖಂಡ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಚರ್ಚೆ ನಡೆಸುವ ಮೂಲಕ ಸೀಟು ಹಂಚಿಕೆ ವಿಚಾರವನ್ನು ಅಂತಿಮಗೊಳಿಸಿದ್ದಾರೆ. 

ಇತ್ತೀಚೆಗಷ್ಟೇ ಅಮಿತ್ ಶಾ ಅವರು ಬಿಹಾರಕ್ಕೆ ಭೇಟಿ  ನೀಡಿದ್ದ ವೇಳೆಯೇ ಸೀಟು ಹಂಚಿಕೆ ಬಗ್ಗೆ  ಅಂತಿಮ ಚರ್ಚೆ ನಡೆಸಿದ್ದರು.