ಬೆಂಗಳೂರು :  ರಾಜಧಾನಿಯ ಡ್ರಗ್ಸ್‌ ದಂಧೆ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ (ಎನ್‌ಸಿಬಿ)ದ ಅಧಿಕಾರಿಗಳು, ಬೆಂಗಳೂರಿನ ಕೆಂಗೇರಿಯಲ್ಲೇ ಉತ್ಪಾದನಾ ಘಟಕ ಹೊಂದಿದ್ದ ಅಂತಾರಾಷ್ಟ್ರೀಯ ಜಾಲವೊಂದನ್ನು ಭೇದಿಸಿ ಸುಮಾರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 32 ಕೋಟಿ ರು. ಮೌಲ್ಯವಿರುವ 52 ಕೆ.ಜಿ.ಡ್ರಗ್ಸ್‌ ಅನ್ನು ಜಪ್ತಿ ಮಾಡಿದ್ದಾರೆ.

ಚೆನ್ನೈ ಮೂಲದ ಜೆ.ಕಣ್ಣನ್‌ ಹಾಗೂ ಬೆಂಗಳೂರಿನ ಶಿವರಾಜ್‌ ಅರಸ್‌ ಬಂಧಿತರಾಗಿದ್ದು, ಆರೋಪಿಗಳಿಂದ ಅರ್ಧ ಕ್ವಿಂಟಾಲ್‌ ಕೆಟಾಮಿನ್‌ ವಶಪಡಿಸಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಡ್ರಗ್ಸ್‌ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಎನ್‌ಸಿಬಿ ದಕ್ಷಿಣ ವಲಯದ ನಿರ್ದೇಶಕ ಸುನೀಲ್‌ ಕುಮಾರ್‌ ಸಿನ್ಹಾ ನೇತೃತ್ವದ ತಂಡವು, ಮೆಜೆಸ್ಟಿಕ್‌ ಹತ್ತಿರದ ಮೂವಿಲ್ಯಾಂಡ್‌ ಬಳಿ ಮಂಗಳವಾರ ಅಕ್ಕಿಚೀಲ ಮತ್ತು ಟ್ರಾಲಿ ಬ್ಯಾಗ್‌ನಲ್ಲಿ ಡ್ರಗ್ಸ್‌ ಸಾಗಿಸುತ್ತಿದ್ದ ಕಣ್ಣನ್‌ನನ್ನು ಬಂಧಿಸಿತು. ಈ ವೇಳೆ ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡ ಅರಸ್‌ ಬೆನ್ನುಹತ್ತಿದ ಅಧಿಕಾರಿಗಳು, ಮರುದಿನ ಯಲಹಂಕ ಬಳಿ ಆತನ್ನು ಬಂಧಿಸಿ ವಿಚಾರಿಸಿದಾಗ ಕೆಂಗೇರಿ ಮತ್ತು ಹೈದರಾಬಾದ್‌ನಲ್ಲಿ ಆ ತಂಡದ ಡ್ರಗ್ಸ್‌ ತಯಾರಿಕಾ ಘಟಕಗಳು ಇರುವ ವಿಚಾರ ಬಯಲಾಗಿವೆ.

ಈ ಮಾಹಿತಿ ಮೇರೆಗೆ ಅರಸ್‌ ಸಮ್ಮುಖದಲ್ಲೇ ಕೆಂಗೇರಿಯ ವಿದ್ಯಾನಗರದಲ್ಲಿದ್ದ ಇದ್ದ ಉತ್ಪಾದಕ ಘಟಕದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅಲ್ಲಿ 24.5 ಕೆ.ಜಿ. ಕೆಟಾಮಿನ್‌ ಜಪ್ತಿ ಮಾಡಿದ್ದಾರೆ. ಮತ್ತೊಂದು ಎನ್‌ಸಿಬಿ ತಂಡವು, ಹೈದರಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿ ಮತ್ತೊಬ್ಬ ಪೂರೈಕೆದಾರರನ್ನು ಬಂಧಿಸಿದೆ ಎಂದು ಸುನೀಲ್‌ ಕುಮಾರ್‌ ಸಿನ್ಹಾ ತಿಳಿಸಿದ್ದಾರೆ.

ಮನೆಯ ಬೇಸ್‌ಮೆಂಟ್‌ನಲ್ಲೇ ಲ್ಯಾಬ್‌: ಹಲವು ದಿನಗಳಿಂದ ಡ್ರಗ್ಸ್‌ ಸಾಗಣೆದಾರರ ಬೆನ್ನುಹತ್ತಿದ್ದಾಗ ಬೆಂಗಳೂರು ಮತ್ತು ಹೈದಾರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ಜಾಲವೊಂದರ ಚಟುವಟಿಕೆ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಸಿಕ್ಕಿದ ಕೂಡಲೇ ಆ ಎರಡು ನಗರಗಳ ಮೇಲೆ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಎನ್‌ಸಿಬಿ ತಂಡವುಗಳು ಕಾರ್ಯಾಚರಣೆಗಿಳಿದ್ದವು. ಏ.30ರಂದು ಮೆಜೆಸ್ಟಿಕ್‌ ಸಮೀಪ ಡ್ರಗ್‌ ಸಾಗಣೆದಾರ ಕಣ್ಣನ್‌, ಬೆಂಗಳೂರಿನ ಪೂರೈಕೆದಾರರ ಅರಸ್‌ನಿಂದ ಡ್ರಗ್ಸ್‌ ತೆಗೆದುಕೊಂಡು ಹೋಗಲು ಬಂದಿದ್ದ ವಿಷಯ ತಿಳಿಯಿತು ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅದರಂತೆ ಕಾರ್ಯಪ್ರವೃತ್ತರಾದ ಎನ್‌ಸಿಬಿ ತಂಡಕ್ಕೆ ಮೆಜೆಸ್ಟಿಕ್‌ನ ಮೂವಿಲ್ಯಾಂಡ್‌ ಚಿತ್ರಮಂದಿರದ ಬಳಿ ಅಕ್ಕಿ ಚೀಲ ಮತ್ತು ಟ್ರಾಲಿ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕಣ್ಣನ್‌ ಎದುರಾಗಿದ್ದಾನೆ. ತಕ್ಷಣವೇ ಅನುಮಾನದ ಮೇರೆಗೆ ಆತನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ 26.75 ಕೆ.ಜಿ.ಕೆಟಾಮಿನ್‌ ಪತ್ತೆಯಾಗಿದೆ. ಈ ಹಂತದಲ್ಲಿ ಆತನಿಗೆ ಡ್ರಗ್ಸ್‌ ಪೂರೈಸಿದ್ದ ಅರಸ್‌, ಎನ್‌ಸಿಬಿ ಅಧಿಕಾರಿಗಳನ್ನು ನೋಡಿದ ಕೂಡಲೇ ಅಲ್ಲಿಂದ ಕ್ಷಣಾರ್ಧದಲ್ಲಿ ಕಾರಿನಲ್ಲಿ (ಕೆಎ-03, ಎಂಡಿ-7250) ತಪ್ಪಿಸಿಕೊಂಡಿದ್ದಾನೆ. ಬಳಿಕ ಆತನ ಬೆನ್ನುಹಟ್ಟಿದ ಅಧಿಕಾರಿಗಳು, ಮೊಬೈಲ್‌ ಕರೆಗಳ ಮೂಲಕ ಬುಧವಾರ ಯಲಹಂಕದಲ್ಲಿ ಬಂಧಿಸಿದ್ದಾರೆ. ಆನಂತರ ಕಚೇರಿಗೆ ಕರೆತಂದು ವಿಚಾರಿಸಿದಾಗ ಅರಸ್‌, ಕೆಂಗೇರಿಯ ವಿದ್ಯಾನಗರದಲ್ಲಿ ತನ್ನ ಮನೆಯ ಬೇಸ್‌ಮೆಂಟ್‌ನಲ್ಲೇ ಕೆಟಾಮಿನ್‌ ತಯಾರಿಕಾ ಘಟಕ ಹೊಂದಿರುವ ಸಂಗತಿ ಬಯಲಾಯಿತು. ಅದರಂತೆ ಗುರುವಾರ ಘಟಕದ ಮೇಲೆ 25.45 ಕೆಜಿ ಕೆಟಾಮಿನ್‌ ಜಪ್ತಿ ಮಾಡಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಶಿವರಾಜ್‌ ಅರಸ್‌ ವೃತ್ತಿಪರ ಡ್ರಗ್ಸ್‌ ಡೀಲರ್‌ ಆಗಿದ್ದು, ಆತನಿಗೆ ಆಗ್ನೇಯ ಏಷ್ಯಾ ಮತ್ತು ಆಸ್ಪ್ರೇಲಿಯಾದ ಡ್ರಗ್ಸ್‌ ಜಾಲದ ಜೊತೆ ಸಂಪರ್ಕವಿರುವ ಮಾಹಿತಿ ಸಿಕ್ಕಿದೆ. ಈ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಇನ್ನು ಚೆನ್ನೈನ ಕೊರಿಯರ್‌ ಸಂಸ್ಥೆಯಲ್ಲಿ ಕೆಲಸಗಾರನಾದ ಕಣ್ಣನ್‌, ಹಣದಾಸೆಗೆ ಡ್ರಗ್ಸ್‌ ಸಾಗಾಣಿಕೆಗೆ ಸಹಕರಿಸಿದ್ದಾನೆ. ಜಪ್ತಿಯಾದ ಡ್ರಗ್ಸ್‌ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ .32 ಕೋಟಿ ಮೌಲ್ಯವಿದ್ದು, ಭಾರತದಲ್ಲಿ ಅದು .3 ಕೋಟಿ ಬೆಲೆ ಬಾಳುತ್ತದೆ. ಕೆಜಿಗೆ ಸ್ಥಳೀಯವಾಗಿ 3ರಿಂದ 4 ಲಕ್ಷ ರು. ಬೆಲೆ ಇದೆ.

-ಸುನೀಲ್‌ ಕುಮಾರ್‌ ಸಿನ್ಹಾ, ಹೆಚ್ಚುವರಿ ನಿರ್ದೇಶಕ, ಎನ್‌ಸಿಬಿ ದಕ್ಷಿಣ ವಲಯ