ಕರ್ತಾರ್ ಪುರ್ ಕಾರಿಡಾರ್ ಯೋಜನೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಸಿಧು ಪಾಕಿಸ್ತಾನಕ್ಕೆ ತೆರಳಿದ್ದ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ನಿನ್ನೆ ಶುಕ್ರವಾರ ಇದಕ್ಕೆ ಸ್ಪಷ್ಟನೆ ನೀಡಿದ್ದ ಸಿಧು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ತನಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸೂಚಿಸಿದ್ದರು ಎಂಬ ಹೇಳಿಕೆ ನೀಡಿದ್ದರು. ಆದರೀಗ ಈ ಹೇಳಿಕೆ ನೀಡಿದ ಬೆನ್ನಲ್ಲೇ ಯೂ ಟರ್ನ್ ಹೊಡೆದಿರುವ ನವಜೋತ್ ಸಿಂಗ್ ಸಿಧು ರಾಹುಲ್ ಗಾಂಧಿ ನನಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿರಲೇ ಇಲ್ಲ ಎಂದಿದ್ದಾರೆ. 

ಇದನ್ನೂ ಓದಿ: ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದು ರಾಹುಲ್ ಗಾಂಧಿ: ಸಿಧು!

ಶುಕ್ರವಾರ ತಡರಾತ್ರಿ ಈ ವಿಚಾರವಾಗಿ ಟ್ವೀಟ್ ಮಾಡಿರುವ ಪಂಜಾಬ್ ಕ್ಯಾಬಿನೆಟ್ ಮಂತ್ರಿ ನವಜೋತ್ ಸಿಂಗ್ ಸಿಧು ರಾಹುಲ್ ಗಾಂಧಿಯವರು ನನಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಯಾವತ್ತೂ ಹೇಳಿಲ್ಲ. ಯಾವುದೇ ವಿಚಾರ ಬೇರೆಯವರಿಗೆ ಹೇಳುವ ಮುನ್ನ ಸತ್ಯ ಏನೆಂದು ತಿಳಿದುಕೊಳ್ಳಿ. ನಾನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ವೈಯುಕ್ತಿಕ ಆಮಂತ್ರಣದ ಮೇರೆಗೆ ಅಲ್ಲಿಗೆ ಹೋಗಿದ್ದೆ ಎಂಬ ವಿಚಾರ ಇಡೀ ವಿಶ್ವಕ್ಕೇ ತಿಳಿದಿದೆ ಎಂದಿದ್ದಾರೆ.

ಪಂಜಾಬ್ ಕ್ಯಾಬಿನೆಟ್ ಮಂತ್ರಿ ಸಿಧು ಶುಕ್ರವಾರದಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ ನಾನು ರಾಹುಲ್ ಗಾಂಧಿಯವರ ಸೂಚನೆ ಮೇರೆಗೆ ಪಾಕಿಸ್ತಾನದಲ್ಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ ಎಂದಿದ್ದರು.

ಕಾರ್ಯಕ್ರಮಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಸಿಧು ಇಬ್ಬರುಗೂ ಆಮಂತ್ರಣ ಬಂದಿತ್ತು. ಆದರೆ ಪಂಜಾಬ್ ಸಿಎಂ ಕಾರ್ಯಕ್ರಮದಲ್ಲಿ ಭಾಗ್ಿಯಾಗಲು ನಿರಾಕರಿಸಿದ್ದಯು, ಸಿಧು ಒಬ್ಬರೇ ಪಾಕ್ ಗೆ ತೆರಳಿದ್ದರು. ಆದರೆ ಈ ಭೇಟಿ ಬಳಿಕ ಸಿಧು ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.