ಕಾರವಾರ[ಏ.26]: ಭಾರತದ ನೌಕಾಸೇನೆಯ ಯುದ್ಧನೌಕೆ INS ವಿಕ್ರಮಾದಿತ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಂದಿಸುವ ಕಾರ್ಯದ ನೇತೃತ್ವ ವಜಹಿಸಿದ್ದ ನೌಕಾಧಿಕಾರಿ ಲೆಫ್ಟಿನೆಂಟ್​ ಕಮಾಂಡರ್​ ಡಿಎಸ್​ ಚೌಹಾಣ್ ಸಾವನ್ನಪ್ಪಿದ್ದಾರೆ. 

"

ಕಾರವಾರದ ಬಂದರಿನಲ್ಲಿದ್ದ ಯುದ್ಧನೌಕೆ INS ವಿಕ್ರಮಾದಿತ್ಯದಲ್ಲಿ ಇಂದು ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ನಂದಿಸುತ್ತಿದ್ದ ತಂಡದ ನೇತೃತ್ವ ವಹಿಸಿಕೊಂಡಿದ್ದ ನೌಕಾಧಿಕಾರಿ ಡಿಎಸ್​ ಚೌಹಾಣ್ ನೌಕೆಯಲ್ಲಿ ಹಬ್ಬಿಕೊಂಡಿದ್ದ ದಟ್ಟ ಹೊಗೆಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ನಗರದ ನೌಕಾಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ನೌಕಾಧಿಕಾರಿಗಳು 'ನೌಕೆಯಲ್ಲಿ ವ್ಯಾಪಿಸಿದ್ದ ಬೆಂಕಿ ನಿಯಂತ್ರಿಸಲು ತಂಡ ಯಶಸ್ವಿಯಾಗಿದೆ. ಇನ್ನು ಈ ಅನಾಹುತ ಸಂಭವಿಸಲು ಕಾರಣವೇನು ಎಂದು ತಿಳಿದು ಬಂದಿಲ್ಲವಾದರೂ, ಈ ಕುರಿತಾಗಿ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಹಡಗಿನ ಸಾಮರ್ಥ್ಯಕ್ಕೆ ಯಾವುದೇ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದೇವೆ' ಎಂದಿದ್ದಾರೆ.

INS ವಿಕ್ರಮಾದಿತ್ಯ ಯುದ್ಧ ನೌಕೆಯನ್ನು 2014ರಲ್ಲಿ ರಷ್ಯಾದಿಂದ ತರಿಸಿಕೊಳ್ಳಲಾಗಿತ್ತು. 284 ಮೀ ಉದ್ದ ಹಾಗೂ 60 ಮೀ ಅಗಲವಿರುವ ಈ ಯುದ್ಧನೌಕೆ ಒಟ್ಟು 40 ಸಾವಿರ ಟನ್​  ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ಭಾರತದ ಅತಿ ದೊಡ್ಡ ಯುದ್ಧ ನೌಕೆಯಾಗಿದೆ.