ಉಡುಪಿ (ಏ. 30):  ಲೋಕಸಭಾ ಚುನಾವಣೆ ಭರಾಟೆಯಲ್ಲಿ ದೈಹಿಕವಾಗಿ ಸುಸ್ತಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಪ್ರಕೃತಿ ಚಿಕಿತ್ಸೆಗಾಗಿ ಮತ್ತೆ ಇಲ್ಲಿನ ಮೂಳೂರು ಗ್ರಾಮದ ಖಾಸಗಿ ರೆಸಾರ್ಟ್‌ಗೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ ಇಲ್ಲಿ ಬಂದಿಳಿದ ಅವರು, ಸೋಮವಾರ ಮಧ್ಯಾಹ್ನ ಉಡುಪಿಯಲ್ಲಿ ನಡೆದ ಮಾಜಿ ಶಾಸಕ ಗೋಪಾಲ ಪೂಜಾರಿ ಮಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿದರು.

ಕಳೆದ ವಾರ ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಚಾರ ಮುಗಿಸಿ ಮೈಕೈ ನೋವಿನ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಶ್ರೀಲಂಕಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜೆಡಿಎಸ್ ಕಾರ್ಯಕರ್ತರು ಮೃತಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹಿಂದಕ್ಕೆ ಹೋಗಿದ್ದರು. ಆಗ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ತನ್ಮಯ ಗೋಸ್ವಾಮಿ ಅವರು ವಾರ ಬಿಟ್ಟು ಬರುವಂತೆ ತಿಳಿಸಿದ್ದರು. ಅದರಂತೆ ಇದೀಗ ರಾಜಕೀಯ ಜಂಜಾಟದ ನಡುವೆಯೂ ಭಾನುವಾರ ಮತ್ತೆ ಇಲ್ಲಿಗೆ ಆಗಮಿಸಿದ್ದಾರೆ. ಈ ಬಾರಿ ಅವರೊಂದಿಗೆ ಎಚ್.ಡಿ.ದೇವೇಗೌಡರೂ ಬಂದಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ಬಾರಿ ಸಚಿವರಾದ ಸಾ.ರಾ.ಮಹೇಶ್, ಪುಟ್ಟರಾಜು, ಶ್ರೀನಿವಾಸ್ ಮತ್ತು ಇನ್ನಿಬ್ಬರು ಶಾಸಕರೂ ಆಗಮಿಸಿದ್ದರು. ಈ ಬಾರಿ ಸಾ.ರಾ.ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮಾತ್ರ ಬಂದಿದ್ದಾರೆ, ಇನ್ನೂ ಕೆಲ ಸಚಿವರು ಮತ್ತು ಶಾಸಕರು ಇಲ್ಲಿಗೆ ಬರಲಿದ್ದಾರೆ.

ಸಿಎಂಗೆ ಬೆನ್ನು ಮಸಾಜ್: ಮುಖ್ಯವಾಗಿ ಬೆನ್ನು ಮತ್ತು ಕತ್ತು ನೋವಿನ ಚಿಕಿತ್ಸೆಗಾಗಿ ಬಂದಿರುವ ಕುಮಾರಸ್ವಾಮಿ 5-6 ದಿನ ಇಲ್ಲಿಯೇ ಉಳಿದುಕೊಂಡು ಪಂಚಕರ್ಮ ಚಿಕಿತ್ಸೆಗೆ ಒಳಗಾಗಲಿದ್ದಾರೆ.

ಸೋಮವಾರ ಬೆಳಗ್ಗೆ ರೆಸಾರ್ಟ್ ಮುಂದಿನ ಅರಬ್ಬಿಸಮುದ್ರದ ತಂಗಾಳಿಗೆ ಮೈಯೊಡ್ಡಿದ ಅವರು ಬೆನ್ನು ಮಸಾಜ್ ಮಾಡಿಸಿಕೊಂಡರು. ಹಂತಹಂತವಾಗಿ ವಮನ, ವಿಲೋಚನಾ, ಭಸ್ತಿ, ನಶ್ಯ, ರಕ್ತಮೋಶನಾ ಎಂಬ ಪಂಚ ಚಿಕಿತ್ಸೆಗಳು ನಡೆಯಲಿದೆ.

ಗೌಡರಿಗೆ ಆಯಿಲ್ ಮಸಾಜ್:

ಇನ್ನು ದೇವೇಗೌಡರು ಸೋಮವಾರ ಸಂಪೂರ್ಣವಾಗಿ ವೈದ್ಯರಿಂದ ತಪಾಸಣೆಗೆ ಒಳಗಾದರು. ಅವರಿಗೂ ಒಂದಿಷ್ಟು ಚಿಕಿತ್ಸೆಯ ಅಗತ್ಯ ಹೇಳಿರುವ ಡಾ.ತನ್ಮಯ್ ಗೋಸ್ವಾಮಿ, ಆಯಿಲ್ ಮಸಾಜ್ ಮಾಡಿಸಿದರು. ಇದರಿಂದ ನಿರಾಳವಾದ ದೇವೇಗೌಡರು ಲಘು ಆಹಾರ ಸ್ವೀಕರಿಸಿ ಸಂಜೆಯವರೆಗೆ ನಿದ್ರೆಗೆ ಜಾರಿದರು.

ಒಂದು ವಾರ ಫುಲ್ ವೆಜ್: ತಂದೆ-ಮಗ ಇಬ್ಬರಿಗೂ ಒಂದು ವಾರ ಕಾಲ ಸಂಪೂರ್ಣ ಸಸ್ಯಾಹಾರ ಸೇವಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ದೇವೇಗೌಡ ಮಧ್ಯಾಹ್ನ ಚಪಾತಿ, ಪಲ್ಯ-ಪಪ್ಪಾಯಿ ಹಣ್ಣು ಸೇರಿ ಲಘು ಆಹಾರ ಸ್ವೀಕರಿಸಿದರು. ಮುಂಜಾನೆಯಿಂದ ಥೆರಪಿಗಳಲ್ಲಿ ವ್ಯಸ್ತರಾಗಿದ್ದ ಕುಮಾರಸ್ವಾಮಿ ಅನ್ನ, ರಸಂ, ಸಾಂಬಾರ್ ಸ್ವೀಕರಿಸಿ ವಿಶ್ರಾಂತಿ ಪಡೆದರು.

ಮಾಧ್ಯಮಗಳ ಮೇಲೆ ಗರಂ: ಈ ಬಾರಿಯ ಲೋಕಸಭಾ ಚುನಾವಣೆಯುದ್ದಕ್ಕೂ ಮಾಧ್ಯಮಗಳ ಮೇಲೆ ಹರಿಹಾಯುತ್ತಿರುವ ಕುಮಾರಸ್ವಾಮಿ, ಕಳೆದವಾರ ರೆಸಾರ್ಟ್‌ಗೆ ಬಂದಾಗ ಅಲ್ಲಿದ್ದ ಮಾಧ್ಯಮದವರನ್ನು ಕಂಡು ಕಿಡಿಕಿಡಿಯಾಗಿದ್ದರು.
ರೆಸಾರ್ಟ್‌ನ ವ್ಯವಸ್ಥಾಪಕರ ಮೇಲೆ ಹರಿಹಾಯ್ದಿದ್ದರು. ಈ ಬಾರಿ ತಮ್ಮ ಭೇಟಿಯನ್ನು ಸಂಪೂರ್ಣ ಖಾಸಗಿಯಾಗಿಯೇ ಕಳೆಯಲು ಸಿಎಂ ಬಯಸಿದ್ದು, ಯಾರೂ ರೆಸಾರ್ಟ್‌ನ ಆಸುಪಾಸಿಗೂ ಬರದಂತೆ
ಪೊಲೀಸರಿಗೆ ಸೂಚಿಸಿದ್ದಾರೆ.

ಖುದ್ದು ಎಸ್ಪಿ ನಿಶಾ ಜೇಮ್ಸ್ ಅವರೇ ಬಂದು ರೆಸಾರ್ಟ್‌ನ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಿದ್ದಾರೆ. ಭಾನುವಾರ ರಾತ್ರಿ ಚಿತ್ರೀಕರಣಕ್ಕೆ ತೆರಳಿದ್ದ ಮಾಧ್ಯಮದವರಿಗೂ ಪೊಲೀಸರು ಅಡ್ಡಿಪಡಿಸಿದ್ದಾರೆ. ಸೋಮವಾರ ಇಬ್ಬರೂ ನಾಯಕರು ತಮಗೆ ಚಿಕಿತ್ಸೆ ನೀಡಲಾಗುತ್ತಿರುವ ಕುಟೀರಗಳನ್ನು ಬಿಟ್ಟು ಹೊರ ಬಂದಿಲ್ಲ.