ನವದೆಹಲಿ: ಕಾಂಗ್ರೆಸ್‌ ಪಕ್ಷದ ಮುಖವಾಣಿ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ.(ಎಜೆಎಲ್‌)ಗೆ ದೆಹಲಿಯಲ್ಲಿನ ಕಟ್ಟಡವನ್ನು 2 ವಾರಗಳಲ್ಲಿ ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ. 

ಇದರೊಂದಿಗೆ ಕಟ್ಟಡ ತೆರವಿಗೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.

ಕಟ್ಟಡವನ್ನು ಪತ್ರಿಕೆ ಮುದ್ರಣಕ್ಕೆಂದು ಎಜೆಲ್‌ಗೆ ನೀಡಲಾಗಿತ್ತು. ಆದರೆ ಕಳೆದ 10 ವರ್ಷದಿಂದ ಕಟ್ಟಡದಲ್ಲಿ ಯಾವುದೇ ಮುದ್ರಣ ನಡೆಯುತ್ತಿಲ್ಲ ಎಂಬ ಕಾರಣ ನೀಡಿ ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಕಟ್ಟಡ ತೆರವಿಗೆ ಸೂಚಿಸಿತ್ತು. 

ಇದನ್ನು ಎಜೆಎಲ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 2018ರ ಸೆ.ನಿಂದ ಇಲ್ಲಿ ಪತ್ರಿಕೆ ಮುದ್ರಣ ಆರಂಭವಾಗಿದೆಯಾದರೂ, ಆದಾಗಲೇ ಪ್ರಕರಣ ತೀರ್ಪಿನ ಹಂತಕ್ಕೆ ಬಂದಿತ್ತು.