ವಾಷಿಂಗ್ಟನ್(ಜು.19): ಯೌವನವೇ ಹಾಗೆ. ತನ್ನ ಸುತ್ತಲಿನ ವ್ಯವಸ್ಥೆಯನ್ನು ಬದಲಿಸಿ ಬಿಡುವ ಹುಮ್ಮಸ್ಸಿನಿಂದ ಕುಣಿಯುತ್ತಿರುತ್ತದೆ. ತನ್ನ ಬಲಿಷ್ಠ ಕೈಗಳಿಂದ ಎಲ್ಲವನ್ನೂ ಒಂದೇ ಹೊಡೆತಕ್ಕೆ ತನ್ನಿಷ್ಟದಂತೆ ನಡೆಸಬಲ್ಲ ಶಕ್ತಿ ಈ ಯೌವನಕ್ಕಿದೆ.

ಇನ್ನು ಯೌವನಾವಸ್ಥೆಯ ನಕ್ಷತ್ರ ಅಂದ್ರೆ ಕೇಳಬೇಕೆ?. ಅಗಾಧ ಶಕ್ತಿಯಿಂದ ಕುದಿಯುವ ಯೌವನಾವಸ್ಥೆಯ ನಕ್ಷತ್ರ ತನ್ನ ಗುರುತ್ವಬಲದ ಪರೀಧಿಯಲ್ಲಿ ಬರುವ ಎಲ್ಲವನ್ನೂ ನುಂಗಿ ಹಾಕುತ್ತಾ ಝೇಂಕರಿಸುತ್ತಿರುತ್ತದೆ.

ಅದರಂತೆ ಯೌವನಾವಸ್ಥೆಯ ನಕ್ಷತ್ರವೊಂದು ತನ್ನ ಗುರುತ್ವಬಲದ ಸಮೀಪಕ್ಕೆ ಬರುವ ಗ್ರಹಕಾಯಗಳನ್ನು ಕಬಳಿಸುತ್ತಿರುವ ಅಪರೂಪದ ವಿದ್ಯಮಾನವನ್ನು ನಾಸಾ ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ. ನಾಸಾದ ಚಂದ್ರಾ ಎಕ್ಸ್-ರೇ ವೀಕ್ಷಣಾಲಯ ಯುವ ನಕ್ಷತ್ರವೊಂದು ತನ್ನ ಸುತ್ತಲಿನ ಗ್ರಹಕಾಯಗಳನ್ನು ಆಪೋಷಣ ತೆಗೆದುಕೊಳ್ಳುವ ವಿದ್ಯಮಾನ ಸೆರೆ ಹಿಡಿದಿದೆ.

ಈ ಕುರಿತು ಮಾಹಿತಿ ನೀಡಿರುವ ನಾಸಾ ವಿಜ್ಞಾನಿ ಹನ್ಸ್ ಮಾರ್ಟಿಜ್, ಇಂತಹ ವಿದ್ಯಮಾನ ಘಟಿಸುವುದನ್ನು ಹಿಂದೆಂದೂ ನೋಡಿರಲಿಲ್ಲ ಎಂದು ತಿಳಿಸಿದ್ದಾರೆ.  ಭೂಮಿಯಿಂದ ಸುಮಾರು ೪೫೦ ಜ್ಯೋತಿವರ್ಷ ದೂರವಿರುವ ಈ ಯುವ ನಕ್ಷತ್ರ, ಗ್ರಹಕಾಯಗಳ ಘರ್ಷಣೆಯ ಲಾಭ ಪಡೆದು ಅವುಗಳನ್ನು ತಿಂದು ಹಾಕುತ್ತಿದೆ ಎನ್ನಲಾಗಿದೆ.

ಪರಿಣಾಮವಾಗಿ ಗ್ರಹಗಳ ಅವಶೇಷಗಳು ನಕ್ಷತ್ರಕ್ಕೆ ಬಿದ್ದಂತೆ, ಇದು ಧೂಳಿನ ಮತ್ತು ಅನಿಲದ ದಪ್ಪ ಮುಸುಕನ್ನು ಉತ್ಪಾದಿಸುತ್ತಿದೆ. ಅಲ್ಲದೇ  ತಾತ್ಕಾಲಿಕವಾಗಿ ನಕ್ಷತ್ರದ ಬೆಳಕನ್ನು ಅಸ್ಪಷ್ಟಗೊಳಿಸುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.