1. ಸಂವಿಧಾನ 370ನೇ ವಿಧಿ ರದ್ದು

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ ನೀಡಿದೆ. ಆದರೆ ಇದಕ್ಕೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸುಪ್ರೀಂ ಕೋರ್ಟ್‌ ಕೂಡ ಇತ್ತೀಚಿನ ತನ್ನ ಆದೇಶವೊಂದರಲ್ಲಿ ಸಂವಿಧಾನದ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ತಾತ್ಕಾಲಿಕ ಅವಕಾಶವಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಸ್ಥಳೀಯರ ವಿರೋಧ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳ ನಡುವೆಯೇ, ಈ ವಿವಾದಿತ ಕಾಯ್ದೆಯನ್ನು ಬಿಜೆಪಿ ಹೇಗೆ ರದ್ದು ಮಾಡಲಿದೆ ಎಂಬುದು ಕುತೂಹಲ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಿಜೆಪಿ ಬಹುಮತ ಪಡೆದುಕೊಂಡರೆ ಇಂಥದ್ದೊಂದು ಅವಕಾಶ ಹೆಚ್ಚಿದೆ. ಸಂವಿಧಾನದ 370ನೇ ವಿಧಿಯಿಂದಾಗಿ, ಭಾರತದ ಸಂಸತ್‌ ಕೂಡ ಜಮ್ಮು ಮತ್ತು ಕಾಶ್ಮೀರದ ಮೇಲೆ ಹೆಚ್ಚಿನ ಅಧಿಕಾರ ಹೊಂದಿಲ್ಲ.

2. ರಾಮಮಂದಿರ ನಿರ್ಮಾಣ

1991ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಬಹಿರಂಗವಾಗಿಯೇ ಘೋಷಿಸಿತ್ತು. ನಂತರ 1996ರಿಂದಲೂ ಈ ವಿಷಯವನ್ನು ಅದು ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುತ್ತಲೇ ಇದೆ. ನಂತರದಲ್ಲಿ ಅದು 2 ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು, ರಾಮಮಂದಿರ ನಿರ್ಮಾಣಕ್ಕೆ ಮುಂದಾಗಲಿಲ್ಲ. ರಾಮಮಂದಿರ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗ ಯಾರದ್ದು ಎಂಬ ವಿವಾದ ಇದೀಗ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. ಆದಷ್ಟುಬೇಗ ವಿಚಾರಣೆ ನಡೆಸಿ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡುವ ಉದ್ದೇಶದಲ್ಲಿ ಕೋರ್ಟ್‌ ಕೂಡ ಇದೆ. ಹೀಗೆ ವಿವಾದ ವಿಚಾರಣೆ ಹಂತದಲ್ಲಿರುವ ಸರ್ಕಾರ, ಮಂದಿರ ನಿರ್ಮಾಣ ಮಾಡುವುದು ಸಾಧ್ಯವಿಲ್ಲ. ಒಂದು ವೇಳೆ ಮಂದಿರ ನಿರ್ಮಾಣಕ್ಕೆ ಸುಪ್ರೀಂ ತೀರ್ಪಿನಲ್ಲಿ ಅವಕಾಶ ಸಿಕ್ಕರೆ ಬಿಜೆಪಿ ಬಚಾವ್‌. ಇಲ್ಲದೇ ಹೋದಲ್ಲಿ ಸರ್ಕಾರ ಏನು ಮಾಡುತ್ತದೆ? ಭರವಸೆ ಉಳಿಸಿಕೊಳ್ಳಲು ಯಾವ ಹೆಜ್ಜೆ ಇಡುತ್ತದೆ ಎಂಬುದು ಕುತೂಹಲದ ಸಂಗತಿ.

3. ಏಕರೂಪದ ನಾಗರಿಕ ಸಂಹಿತೆ

ಪ್ರಸಕ್ತ ಭಾರತದಲ್ಲಿ 1955ರ ಹಿಂದೂ ವಿವಾಹ ಕಾಯ್ದೆ, 1937ರ ಮುಸ್ಲಿಂ ವೈಯಕ್ತಿಕ ಕಾನೂನು, 1872ರ ವಿವಾಹ ಕಾಯ್ದೆ ಮತ್ತು 1937ರ ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆಗಳು ಜಾರಿಯಲ್ಲಿವೆ. ಆಯಾ ಧರ್ಮಗಳ ನಂಬಿಕೆ, ಆಚರಣೆ ಆಧರಿಸಿ ಈ ಕಾಯ್ದೆಗಳನ್ನು ರೂಪಿಸಲಾಗಿದೆ. ಹೀಗೆ ವಿವಾಹ, ವಿಚ್ಛೇದನ, ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಹಿಂದೂಗಳಿಗೆ ಒಂದು ರೀತಿ, ಮುಸ್ಲಿಮರಿಗೆ ಇನ್ನೊಂದು ರೀತಿ, ಕ್ರೈಸ್ತರಿಗೆ ಮತ್ತೊಂದು ರೀತಿಯ ಕಾನೂನಿನ ಆಧಾರದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಬೇಕು. ಇದನ್ನು ತಪ್ಪಿಸಿ, ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಧರ್ಮವನ್ನು ಬದಿಗೊತ್ತಿ, ಎಲ್ಲರಿಗೂ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ ಜಾರಿಯ ಉದ್ದೇಶವನ್ನು ಕೇಂದ್ರ ಹೊಂದಿದೆ. ಆದರೆ ಇದಕ್ಕೆ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಈಗಾಗಲೇ ತೀವ್ರ ವಿರೋಧ ಹೊಂದಿವೆ. ಕಾಂಗ್ರೆಸ್‌ ಸೇರಿ ಕೆಲ ರಾಜಕೀಯ ಪಕ್ಷಗಳು ತಮ್ಮ ವಿರೋಧ ಹೊಂದಿವೆ. ಹೀಗಾಗಿ ಎಲ್ಲಾ ಪಾಲುದಾರರನ್ನು ಒಗ್ಗೂಡಿಸಿ ಸರ್ಕಾರ ಹೇಗೆ ಹೊಸ ಕಾನೂನು ರೂಪಿಸುತ್ತದೆ ಎಂಬುದು ಕಾತುರದ ವಿಷಯ.

4. ರಾಷ್ಟ್ರೀಯ ನಾಗರಿಕ ನೋಂದಣಿ

ಈಶಾನ್ಯ ರಾಜ್ಯಗಳಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸಿಗರನ್ನು ದೇಶದಿಂದ ಹೊರಹಾಕುವ ನಿಟ್ಟಿನಲ್ಲಿ ಸರ್ಕಾರ ರಾಷ್ಟ್ರೀಯ ನಾಗರಿಕ ನೊಂದಣಿ ಕಾಯ್ದೆ ರೂಪಿಸಿದೆ. ಅಸ್ಸಾಂಗೆಂದು ರೂಪಿಸಲಾದ ಈ ಕಾಯ್ದೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾದ ಅಂತಿಮ ಕರಡು ಪಟ್ಟಿಯಲ್ಲಿ ಅಸ್ಸಾಂನ 2.89 ಕೋಟಿ ನಾಗರಿಕರು ಮಾತ್ರವೇ ಸ್ಥಾನ ಪಡೆದಿದ್ದಾರೆ. ಇನ್ನೂ 40 ಲಕ್ಷಕ್ಕೂ ಹೆಚ್ಚು ನಾಗರಿಕರು ವಿವಿಧ ಕಾರಣಗಳಿಂದಾಗಿ ಅಥವಾ ಅರ್ಹ ದಾಖಲೆ ನೀಡಲು ವಿಫಲರಾಗಿ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ. ಜುಲೈ 31ರೊಳಗೆ ಅಂತಿಮ ಪಟ್ಟಿಬಿಡುಗಡೆಗೆ ಈಗಾಗಲೇ ಸುಪ್ರೀಂಕೋರ್ಟ್‌ ಸೂಚಿಸಿದೆ. ಆ ಗಡುವಿನ ಬಳಿಕ ಪಟ್ಟಿಯಿಂದ ಹೊರಗೆ ಉಳಿದ 40 ಲಕ್ಷ ಜನರನ್ನು ಹೇಗೆ ದೇಶದಿಂದ ಹೊರಗೆ ಹಾಕಲಾಗುತ್ತದೆ ಎಂಬುದಕ್ಕೆ ಈವರೆಗೆ ಯಾವುದೇ ಉತ್ತರವಿಲ್ಲ. ಜೊತೆಗೆ ಇನ್ನೂ ಕೆಲವು ಈಶಾನ್ಯ ರಾಜ್ಯಗಳಲ್ಲೂ ಇಂಥ ಕಾಯ್ದೆ ಜಾರಿಗೆ ಬಿಜೆಪಿ ಒಲವು ಹೊಂದಿದೆ. ಇದಕ್ಕೆ ಆಯಾ ರಾಜ್ಯಗಳಲ್ಲಿ ಕೆಲ ಪಕ್ಷಗಳ ವಿರೋಧವಿದೆ. ಹೀಗಾಗಿ ಸರ್ಕಾರದ ಮುಂದಿನ ಹೆಜ್ಜೆ ನಿಗೂಢ.

5. ಬುಲೆಟ್‌ ರೈಲು ಯೋಜನೆ

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಅಹಮದಾಬಾದ್‌- ಮುಂಬೈ ನಡುವಿನ ಬುಲೆಟ್‌ ರೈಲು ಯೋಜನೆ ಕೂಡ ಒಂದು. 2018ರಲ್ಲಿ ಯೋಜನೆಗೆ ಶಂಕು ಸ್ಥಾಪನೆಯನ್ನೇನೋ ನೆರವೇರಿಸಲಾಗಿದೆ. 2022ರಲ್ಲಿ ಮೊದಲ ರೈಲು ಓಡಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ. ಯೋಜನೆಗೆ ಹಣಕಾಸಿನ ಅಡ್ಡಿ ಏನೂ ಇಲ್ಲ. ಆದರೆ ಯೋಜನೆಗೆ ಅಗತ್ಯವಾದ ಜಮೀನು ನೀಡಲು ಹಲವೆಡೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಲವು ಕಡೆ ಇನ್ನೂ ಭೂ ಸ್ವಾಧೀನವೇ ಆಗಿಲ್ಲ. ಜೊತೆಗೆ ಯೋಜನೆಗೆ ಕೆಲವೊಂದು ವಿನಾಯಿತಿ ನೀಡಲು ಮಹಾರಾಷ್ಟ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದ್ದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅದೀಗ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ 2022ರ ವೇಳೆಗೆ ಅಂದರೆ ಇನ್ನು ಕೇವಲ 3 ವರ್ಷಗಳಲ್ಲಿ 1 ಲಕ್ಷ ಕೋಟಿ ರು.ಮೊತ್ತದ ಬೃಹತ್‌ ಯೋಜನೆ ಪೂರ್ಣಗೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಏಳುವುದು ಸಹಜ.

6. 2022ರೊಳಗೆ ರೈತರ ಆದಾಯ ದ್ವಿಗುಣ

130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಗ್ರಾಮೀಣ ಭಾಗದ ಶೇ.70ರಷ್ಟುಕುಟುಂಬಗಳು ತಮ್ಮ ಜೀವನೋಪಾಯಕ್ಕೆ ಇನ್ನೂ ಕೃಷಿಯನ್ನೇ ಅವಲಂಬಿಸಿವೆ. ಇವರ ಪೈಕಿ ಶೆ.80ರಷ್ಟುಜನ ಸಣ್ಣ ಮತ್ತು ಮಧ್ಯಮ ಕೃಷಿಕರು. ಇಂಥ ಕೃಷಿಕರ ಜೀವನ ಮಟ್ಟಸುಧಾರಿಸಲು 2022ರೊಳಗೆ ಅವರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಬಿಜೆಪಿಯದ್ದು. ಆದರೆ ಇದು ಸಾಧ್ಯವಾಗಬೇಕಾದಲ್ಲಿ ಮುಂದಿನ 3 ವರ್ಷಗಳ ಕಾಲ ರೈತರ ಆದಾಯ ಸತತವಾಗಿ ಶೇ.10ರ ದರದಲ್ಲಿ ಏರಿಕೆಯಾಗಬೇಕು. ಆದರೆ ಸದ್ಯದ ಪ್ರಗತಿ ದರ ಕೇವಲ ಶೇ.3.8ರಷ್ಟಿದೆ. ಈ ದರವೇ ಮುಂದುವರೆದರೆ ಸರ್ಕಾರ ಗುರಿ ಈಡೇರಲು ಇನ್ನೂ 2 ದಶಕವೇ ಬೇಕು. ಇದರ ಜೊತೆ ಮಳೆ ಕೊರತೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಸಾವಿರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವಾಗ, ಸರ್ಕಾರ ಗುರಿ ಮುಟ್ಟುವುದು ಹೇಗೆ ಎಂಬುದು ಪ್ರಶ್ನೆ.

7. 2023ಕ್ಕೆ ಸ್ಮಾರ್ಟ್‌ಸಿಟಿ ಕನಸು ನನಸು

ದೇಶದ 100 ಆಯ್ದ ನಗರಗಳನ್ನು ವಿಶ್ವದರ್ಜೆಗೆ ಏರಿಸುವ ಮತ್ತು ಜನರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2017ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಜಾರಿಗೊಳಿಸಿತ್ತು. 5 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ಜಾರಿಗೆ ಹಣ ಪೂರೈಕೆ ಮಾಡಲಿದ್ದು, 2023ರಿಂದ ಈ ಯೋಜನೆ ಫಲ ಜನರಿಗೆ ಸಿಗಲು ಆರಂಭವಾಗಲಿದೆ ಎಂಬುದು ಸರ್ಕಾರ ಹೇಳಿಕೆಯಾಗಿತ್ತು. ಆದರೆ ಸ್ಪರ್ಧಾತ್ಮಕ ಮಾದರಿಯಲ್ಲಿ ಕೇಂದ್ರ ಸರ್ಕಾರ ಆರಿಸಿದ 100 ನಗರಗಳ ಪೈಕಿ ಬಹುತೇಕ ನಗರಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ದೊಡ್ಡ ಮಟ್ಟದಲ್ಲಿ ಜನರಿಗೆ ಕಾಣಸಿಗುತ್ತಿಲ್ಲ. ಇನ್ನು 4 ವರ್ಷಗಳಲ್ಲಿ ಅಂದರೆ ತನ್ನ ಮುಂದಿನ ಅಧಿಕಾರಾವಧಿಯಲ್ಲಿ ಇದು ಮತದಾರರ ಕಣ್ಣಿಗೆ ಕಾಣುವಂತೆ ಮಾಡುವುದು ಮೋದಿ ಸರ್ಕಾರದ ಬಹುದೊಡ್ಡ ಸವಾಲು. ಇಲ್ಲದೇ ಹೋದಲ್ಲಿ ಅದು ಜನ ಸಾಮಾನ್ಯರ ಟೀಕಾ ಪ್ರಹಾರಗಳಿಗೆ ಗುರಿಯಾಗಬಹುದು.

8. ನಿರುದ್ಯೋಗದ ಸಮಸ್ಯೆಗೆ ಮದ್ದು

ಚುನಾವಣೆ ಘೋಷಣೆಗೂ ಮುನ್ನ ಮತ್ತು ಚುನಾವಣೆ ಘೋಷಣೆಯಾದ ಬಳಿಕ ವಿಪಕ್ಷಗಳು ಸರ್ಕಾರವನ್ನು ಪ್ರಮುಖವಾಗಿ ಟೀಕಿಸಿದ ವಿಷಯಗಳ ಪೈಕಿ ನಿರುದ್ಯೋಗ ಪ್ರಮಾಣ ಕೂಡ ಒಂದು. ಹೀಗಾಗಿ ಅಧಿಕಾರಕ್ಕೆ ಬಂದ ತಕ್ಷಣ ಯುವ ಸಮೂಹಕ್ಕೆ ಹೊಸ ಉದ್ಯೋಗ ಸೃಷ್ಟಿಸಲು ವಿವಿಧ ಉತ್ತೇಜನಾ ಕ್ರಮ ಕೈಗೊಳ್ಳುವುದು ಮೋದಿ ಸರ್ಕಾರದ ಪ್ರಮುಖ ಗುರಿಯಾಗುವುದು ಅನಿವಾರ್ಯವಾಗಿದೆ. ಸಾಕಷ್ಟುಅಂಕಿಅಂಶಗಳು ಕೂಡ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿದೆ ಎಂದು ಹೇಳಿವೆ. ಅದಕ್ಕೆ ತಕ್ಕಂತೆ ಕಂಪ್ಯೂಟರೀಕರಣ, ಡಿಜಿಟಲೀಕರಣ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ದೇಶದಲ್ಲಿ ಹೆಚ್ಚುತ್ತಿರುವುದರಿಂದ ಸಾಕಷ್ಟುಕ್ಷೇತ್ರಗಳಲ್ಲಿ ಉದ್ಯೋಗಿಗಳ ಅವಶ್ಯಕತೆ ಇಳಿಮುಖವಾಗುತ್ತಿದೆ. ಜೊತೆಗೆ ಆರ್ಥಿಕತೆಯಲ್ಲಾದ ಹಿನ್ನಡೆಯಿಂದಲೂ ಕಂಪನಿಗಳು ನೌಕರರನ್ನು ಕಿತ್ತುಹಾಕುತ್ತಿವೆ. ಇದಕ್ಕೆ ತಕ್ಷಣವೇ ಪರಿಹಾರ ಹುಡುಕಬೇಕಿದೆ.

9. ಆರ್ಥಿಕತೆಗೆ ಚೇತರಿಕೆಗೆ ಹೊಸ ಕ್ರಮ

ದೇಶದಲ್ಲಿ ಮೇಕ್‌ ಇನ್‌ ಇಂಡಿಯಾದಂಥ ಯೋಜನೆ ಜಾರಿಗೆ ತಂದರೂ ಸಣ್ಣ ಉದ್ಯಮ ವಲಯಕ್ಕೆ ಹೆಚ್ಚಿನ ಲಾಭ ಉಂಟಾಗಿಲ್ಲ. ಜೊತೆಗೆ ಸಣ್ಣ ಮತ್ತು ಮದ್ಯಮ ವಲಯದ ಉದ್ಯಮಗಳು ಅಪನಗದೀಕರಣ ಮತ್ತು ಜಿಎಸ್‌ಟಿ ಹೊಡೆತದಿಂದ ಪೂರ್ಣವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಇದರಿಂದಾಗಿ ದೇಶದಲ್ಲಿ ಔದ್ಯೋಗಿಕ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರಿಂದಾಗಿ ಆರ್ಥಿಕತೆಗೂ ಹಿನ್ನಡೆ ಉಂಟಾಗುತ್ತಿದೆ. ಗುಡಿ ಕೈಗಾರಿಕೆಗಳು ಸಂಕಷ್ಟದಲ್ಲಿವೆ. ಸ್ವ-ಉದ್ಯೋಗಕ್ಕೆ ನಿರೀಕ್ಷಿತ ಒತ್ತು ಸಿಗುತ್ತಿಲ್ಲ. ಹೀಗಾಗಿ ಇವುಗಳನ್ನು ಉತ್ತೇಜಿಸುವ ಮೂಲಕ ಮತ್ತೆ ಆರ್ಥಿಕತೆಗೆ ಚೇತರಿಕೆ ನೀಡುವುದು ಸರ್ಕಾರದ ಆದ್ಯತೆ ಆಗಲೇಬೇಕಿದೆ. ವಿದೇಶಿ ನೇರ ಬಂಡವಾಳಕ್ಕೆ ಮುಕ್ತ ಅನುಮತಿ ಮುಂತಾದ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ ದೇಶದ ಸಮಗ್ರ ಆರ್ಥಿಕ ವ್ಯವಸ್ಥೆಯ ಸುಧಾರಣೆಗೆ ಹೊಸ ಸರ್ಕಾರ ಮುಂದಾಗಬೇಕಿದೆ.

10. ಬೆಲೆಯೇರಿಕೆಗೆ ಕಡಿವಾಣ

ಯುಪಿಎ-2 ಸರ್ಕಾರವನ್ನು ಸೋಲಿಸಿ 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದು ಯುಪಿಎ ಕಾಲದಲ್ಲಿನ ಬೆಲೆಯೇರಿಕೆ ಸಮಸ್ಯೆ. ಅದನ್ನು ನಿಯಂತ್ರಿಸುತ್ತೇನೆಂದು ಮೋದಿ ಹೇಳಿದಾಗ ಜನರು ಖುಷಿಪಟ್ಟಿದ್ದರು. ಅದಕ್ಕೆ ತಕ್ಕಂತೆ ಎನ್‌ಡಿಎ ಸರ್ಕಾರದ ಮೊದಲ ಎರಡು ವರ್ಷ ಅಗತ್ಯ ವಸ್ತುಗಳ ಬೆಲೆಗಳು ನಿಯಂತ್ರಣದಲ್ಲೇ ಇದ್ದವು. ಆದರೆ ಈಗ ಮತ್ತೆ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಭಾರಿ ದುಬಾರಿಯಾಗಿದೆ. ಜನರ ಆದಾಯದಲ್ಲಿ ಹೆಚ್ಚಳವಾಗದೆ ಖರ್ಚು ಮಾತ್ರ ಹೆಚ್ಚಳವಾಗುತ್ತಿದೆ. ಜಿಎಸ್‌ಟಿ ಹಾಗೂ ಅಪನಗದೀಕರಣದ ನಂತರ ಎಲ್ಲ ಸರಕು, ಸೇವೆಗಳೂ ಮೊದಲಿಗಿಂತ ದುಬಾರಿಯಾಗಿವೆ. ಕೃಷಿಕರ ಆದಾಯ ಹೆಚ್ಚುತ್ತಿಲ್ಲ, ಆದರೆ ಅವರಿಗೆ ಅಗತ್ಯವಿರುವ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಆಹಾರ ಧಾನ್ಯಗಳ ಬೆಲೆಯೂ ಬಡ ಹಾಗೂ ಮಧ್ಯಮ ವರ್ಗದವರಿಗೆ ದುಬಾರಿಯಾಗುತ್ತಿದೆ. ಇದಕ್ಕೆಲ್ಲ ಶೀಘ್ರವೇ ಪರಿಹಾರ ಹುಡುಕಬೇಕಿದೆ.