ನಿರ್ದೇಶಕಿ ರೂಪಾ ಅಯ್ಯರ್ ಮತ್ತೊಂದು ದೊಡ್ಡ ಸಿನಿಮಾಗೆ ಕೈ ಹಾಕಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಬದುಕಿನ ಪುಟಗಳನ್ನು ತೆರೆಗೆ ತರುತ್ತಿದ್ದಾರೆ. ಇಷ್ಟಕ್ಕೂ ಮೋದಿ ಬಗ್ಗೆ ಸಿನಿಮಾ ಮಾಡುವ ಯೋಚನೆ ಬಂದಿದ್ದು ಯಾಕೆ? ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿರುವುದೇನು?

ನರೇಂದ್ರ ಮೋದಿ ಜೀವನ ಪುಟಗಳನ್ನು ಆಧರಿಸಿ ಸಿನಿಮಾ ಮಾಡಬೇಕು ಅನಿಸಿದ್ದು ಯಾವಾಗ? ಮತ್ತು ಯಾಕೆ?

ಒಂದು ವರ್ಷದ ಹಿಂದೆ ನನಗೆ ಈ ಯೋಚನೆ ಬಂದಿದ್ದು. ನನ್ನ ಪ್ರಭಾವಿಸಿದ ಗುರುಗಳು, ಆಚಾರ್ಯರು ಹಾಗೂ ಲೀಡರ್‌'ಗಳ ಕುರಿತು ಸಿನಿಮಾ ಮಾಡಬೇಕು. ನಾನು ಸತ್ತ ಮೇಲೂ ನನ್ನ ಕೆಲಸ ದಾಖಲಾಗಿ ಉಳಿಯಬೇಕು. ಆ ನಿಟ್ಟಿನಲ್ಲಿ ಮಹಾತ್ಮ ಗಾಂಧಿ, ನರೇಂದ್ರ ಮೋದಿ, ಶಂಕರಚಾರ್ಯರು, ಮಧ್ವಾಚಾರ್ಯರು ಇವರುಗಳ ಬಗ್ಗೆ ಸಿನಿಮಾ ಮಾಡಬೇಕು ಅಂದುಕೊಂಡು ಆ ಸಾಲಿನಲ್ಲಿ ಮೊದಲಿಗೆ ಸಿನಿಮಾ ಆಗುತ್ತಿರುವುದು ನರೇಂದ್ರ ಮೋದಿ ಅವರ ಕುರಿತು.

ಮೋದಿ ಅವರದ್ದು ಸಿನಿಮಾ ಆಗುವಂತಹ ಜೀವನವೇ? ಅವರು ರಾಜಕಾರಣಿ ಅಲ್ಲವೇ?

ನಾನು ತುಂಬಾ ಗಟ್ಟಿಯಾಗಿ ಸ್ಪಷ್ಟಪಡಿಸುವುದೆಂದರೆ, ‘ನಮೋ’ ಹೆಸರಿನಲ್ಲಿ ನಾನು ಮಾಡುತ್ತಿರುವ ಸಿನಿಮಾ ರಾಜಕಾರಣಿ ಮೋದಿ ಕತೆಯನ್ನಲ್ಲ. ಜಗತ್ತು ಕಂಡ ಒಬ್ಬ ಅದ್ಭುತ ನಾಯಕನ ಕುರಿತು ಸಿನಿಮಾ ಮಾಡುತ್ತಿರುವೆ. ಇಲ್ಲಿ ಪಕ್ಷದ ವ್ಯಕ್ತಿ, ಪ್ರಧಾನ ಮಂತ್ರಿ, ರಾಜಕಾರಣಿ ಎನ್ನುವುದಕ್ಕಿಂತ ಮೋದಿ ಅವರ ಆಧ್ಯಾತ್ಮಿಕ ದೃಷ್ಟಿ ಕೋನವನ್ನು ಅನಾವರಣ ಮಾಡುವಂತಹ ಸಿನಿಮಾ ಇದು. ಖಂಡಿತ, ಅವರ ಬದುಕು ಸಿನಿಮಾ ಆಗುವಂತಹುದೇ. ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಬೇರೆ ಬೇರೆ ದೇಶಗಳಲ್ಲೂ ನೋಟ್ ಬ್ಯಾನ್ ಮಾಡಿದ್ರು. ಅಲ್ಲಿ ಜನ ಬಂಡಾಯ ಎದ್ದು ಅದನ್ನು ವಾಪಸ್ಸು ಪಡೆದುಕೊಂಡರು. ಆದರೆ, ಭಾರತದ ಮಟ್ಟಿಗೆ ಅದು ಸಾಧ್ಯವಾಯಿತು. ವಿರೋಧಿಸುತ್ತಲೇ ಒಪ್ಪಿಕೊಂಡರು. ಜತೆಗೆ ಮೋದಿ ಎಲ್ಲೇ ಹೋಗಲಿ ಜನ ಮೋದಿ ಮೋದಿ ಅಂತ ಕೂಗುತ್ತಾರೆ. ಒಬ್ಬ ಲೀಡರ್ ಆಗಿ ಮೋದಿ ಅವರಲ್ಲಿ ಬೇರೆಯದ್ದೇ ಆದ ಶಕ್ತಿ ಇದೆ. ಅದು ಸಿನಿಮಾ ಮೂಲಕ ಹೇಳುತ್ತಿದ್ದೇನೆ.

ನಿಮಗೆ ನರೇಂದ್ರ ಮೋದಿ ಅವರಲ್ಲಿ ಇಷ್ಟವಾಗಿದ್ದು ಏನು?

ಅವರ ರಾಜತಾಂತ್ರಿಕತೆ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನ. ಇಡೀ ಜಗತ್ತನ್ನು ಭಾರತದ ಕಡೆಗೆ ಸೆಳೆದ ಅವರ ದೂರದೃಷ್ಟಿ. ಇವು ನನಗೆ ಮೋದಿ ಅವರಲ್ಲಿ ಇಷ್ಟವಾಯಿತು. ಅದೇ ಸಿನಿಮಾ ಆಗುವುದಕ್ಕೂ ಕಾರಣವಾಯಿತು.

ನಮೋ ಸಿನಿಮಾ ಮಾಡುವುದಕ್ಕೆ ನಿಮ್ಮ ತಯಾರಿಗಳೇನು?

ಚಿತ್ರದ ಹೆಸರು ನಮೋ. ಟ್ರೂ ಇಂಡಿಯನ್ ಎಂಬುದು ಚಿತ್ರದ ಟ್ಯಾಗ್'ಲೈನ್. ನನ್ನೊಂದಿಗೆ ಚಿತ್ರಕತೆ ಹಾಗೂ ಸಂಭಾಷಣೆ ಬರೆಯುವುದಕ್ಕೆ ಒಂದು ತಂಡ ಮಾಡಿಕೊಂಡಿದ್ದೇನೆ. ಇದರಲ್ಲಿ ಮಠ ಗುರುಪ್ರಸಾದ್, ಸುನೀಲ್ ಪುರಾಣಿಕ್, ಡಾ ಜಯಲಕ್ಷ್ಮೀ ಅವರು ಇದ್ದಾರೆ. ಈಗಾಗಲೇ ಮೋದಿ ಅವರ ಕುರಿತು ಬಂದಿರುವ ಪುಸ್ತಕಗಳನ್ನು ಅಧ್ಯಯನ ಮಾಡಿದ್ದೇನೆ. ಅವರಿಗೆ ತುಂಬಾ ಹತ್ತಿರವಾಗಿರುವ ಸುರೇಶ್ ಬಾಬು, ಗೌರಿಶಂಕರ್ ಅಯ್ಯರ್ ಮುಂತಾದವರ ಜತೆ ಮಾತನಾಡಿ ಆಸಕ್ತಿಕರ ಘಟನೆಗಳನ್ನು ಸಂಗ್ರಹಿಸಿದ್ದೇನೆ. ಇವೆಲ್ಲವನ್ನೂ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವೆ.

ಮೋದಿ ಅವರ ಕುರಿತು ಸಿನಿಮಾ ಮಾಡುವುದಕ್ಕೆ ಇವಿಷ್ಟು ಅಧ್ಯಯನ ಸಾಕಾ?

ಖಂಡಿತ ಸಾಕಾಗಲ್ಲ. ಹೀಗಾಗಿಯೇ ನಾನು ಮುಂದಿನ ವಾರವೇ ನರೇಂದ್ರ ಮೋದಿ ಅವರ ತಾಯಿಯನ್ನು ಭೇಟಿ ಮಾಡುತ್ತಿದ್ದೇನೆ. ಈ ಭೇಟಿ ಮೋದಿ ಅವರ ಬಾಲ್ಯ, ಯೌವ್ವನ, ಆರ್‌ಎಸ್‌ಎಸ್‌'ಗೆ ಬಂದ ಮೇಲೆ ಅವರು ಹೇಗಿದ್ದರು ಎಂಬಿತ್ಯಾದಿ ವಿಚಾರಗಳನ್ನು ತಿಳಿಯಬೇಕಿದೆ. ಬಹುಶಃ ಮೋದಿ ಅವರ ತಾಯಿ ಜತೆ ಮಾತನಾಡಿದ ಮೇಲೆ ನನ್ನ ಕತೆಗೆ ಮತ್ತಷ್ಟು ಅಂಶಗಳು ಸಿಗಲಿವೆ ಅನಿಸುತ್ತದೆ. ಬಹಳಷ್ಟು ಜನಕ್ಕೆ ಗೊತ್ತಿಲ್ಲದ ಸಂಗತಿ ಎಂದರೆ ನರೇಂದ್ರ ಮೋದಿ ಕೂಡ ಕಲಾವಿದರೇ. ಚಿಕ್ಕ ವಯಸ್ಸಿನಲ್ಲಿ ರಂಗಭೂಮಿಯಲ್ಲಿದ್ದವರು. ಸುಮಾರು ನಾಟಕಗಳಲ್ಲಿ ನಟಿಸಿದ್ದಾರೆ ಕೂಡ. ಅವರ ಬಾಲ್ಯದ ಬಣ್ಣದ ದಿನಗಳು ಕೂಡ ಸಿನಿಮಾದಲ್ಲಿ ಬರಲಿದೆ.

ಚಿತ್ರದಲ್ಲಿ ಮೋದಿ ಅವರ ಜೀವನದ ಯಾವ ಯಾವ ಕಾಲಘಟ್ಟಗಳು ಇರಲಿವೆ?

ಬಾಲ್ಯ, ಯೌವ್ವನ, ಆರ್‌ಎಸ್‌ಎಸ್‌'ನಲ್ಲಿ ತೊಡಗಿಸಿಕೊಂಡಿದ್ದು,ನಂತರ ರಾಜಕರಾಣಿಯಾಗಿ ಭಾರತ ಕಂಡ ಅದ್ಭುತ ರಾಜಂತ್ರಜ್ಞ ಆಗಿದ್ದು. ಜತೆಗೆ ಮೋದಿ ಜೀವನದಲ್ಲಿ ಬಂದು ಹೋದ ಪ್ರಮುಖರ ಸುತ್ತ ಈ ಸಿನಿಮಾ ಸಾಗುತ್ತದೆ. ಎಲ್ ಕೆ ಅಡ್ವಾಣಿ ಅವರಿಂದ ಶುರುವಾಗಿ ಅಮಿತ್ ಶಾವರೆಗೂ ಮುಖ್ಯವಾಗಿ 8 ಮಂದಿ ಬಂದು ಹೋಗಿದ್ದಾರೆ. ಆ ಪಾತ್ರಗಳು ಕೂಡ ಚಿತ್ರದಲ್ಲಿ ಬರಲಿವೆ.

ನಮೋ ಪಾತ್ರವನ್ನು ಯಾರು ಮಾಡಲಿದ್ದಾರೆ?

ಮೋದಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬೇಕೆಂಬುದನ್ನು ಇನ್ನೂ ಹುಡುಕುತ್ತಿರುವೆ. ಯಾಕೆಂದರೆ ಕನ್ನಡ ಮತ್ತು ಹಿಂದಿಯಲ್ಲಿ ಈ ಸಿನಿಮಾ ಸೆಟ್ಟೇರುತ್ತಿದೆ. ಎರಡೂ ಭಾಷೆಗೆ ಸೂಕ್ತವಾಗಿರುವ ಮತ್ತು ಮೋದಿ ಅವರ ಮುಖವನ್ನೇ ಹೋಲುವಂತಹ ವ್ಯಕ್ತಿ ಬೇಕು. ಮೋದಿ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.

ಏನೇ ಹೇಳಿದ್ರು ಮೋದಿ ಕುರಿತ ಸಿನಿಮಾ ಅಂದರೆ ಬಿಜೆಪಿ ವ್ಯಕ್ತಿಯ ಸಿನಿಮಾ ಅಂತಾರಲ್ಲವೇ?

ನಾನು ಮೊದಲೇ ಹೇಳಿದ್ದೇನೆ ಇದು ರಾಜಕಾರಣಿ ಮೋದಿ ಕತೆಯಲ್ಲ. ಹಾಗಂತ ಮಹಾತ್ಮ ಗಾಂಧಿ ಕುರಿತು ಸಿನಿಮಾ ಮಾಡಿದಾಗ ಅದನ್ನು ಕಾಂಗ್ರೆಸ್ ಪಕ್ಷದ ಸಿನಿಮಾ ಅನ್ನಲು ಸಾಧ್ಯವೇ? ಅದೇ ರೀತಿ ಮೋದಿ ಕೂಡ. ಇದು ಬಿಜೆಪಿ ಪಕ್ಷದ ವ್ಯಕ್ತಿ ಸಿನಿಮಾ ಅನ್ನುವವರಿಗೆ ನನ್ನ ಸಿನಿಮಾ ಮೂಲಕ ಉತ್ತರ ಕೊಡುವೆ.

ನಿಮ್ಮ ಚಿತ್ರವನ್ನು ಮೋದಿ ಗಮನಕ್ಕೆ ತರುತ್ತೀರಾ?

ಅವರ ಗಮನಕ್ಕೆ ತರುತ್ತೇನೆ. ಜತೆಗೆ ಒಂದು ಪಾತ್ರವಾಗಿ ಬಂದು ಹೋಗುವುದಕ್ಕೆ ಅವರನ್ನು ಕೇಳಿಕೊಳ್ಳುತ್ತೇನೆ. ಬಾಂಬೆನಲ್ಲಿ ಈ ಚಿತ್ರದ ಪತ್ರಿಕಾಗೋಷ್ಠಿ ಮುಗಿಸಿ, ಮೋದಿ ಅವರ ತಾಯಿಯನ್ನು ಭೇಟಿ ಮಾಡಿದ ನಂತರ ಮೋದಿ ಜತೆ ಮಾತನಾಡುವುದಕ್ಕೆ ಪ್ರಯತ್ನಿಸುತ್ತೇನೆ.

ಎಲ್ಲೆಲ್ಲಿ ಚಿತ್ರೀಕರಣ, ಎಷ್ಟು ದಿನ, ನಿರ್ಮಾಪಕರು ಯಾರು, ತಾಂತ್ರಿಕ ತಂಡದಲ್ಲಿ ಯಾರೆಲ್ಲ ಇದ್ದಾರೆ?

ನನ್ನ ಪ್ರಕಾರ 100 ದಿನ ಚಿತ್ರೀಕರಣಕ್ಕೆ ಬೇಕು. ಬೆಂಗಳೂರು ಸೇರಿದಂತೆ ಭಾರತದ ಬೇರೆ ಬೇರೆ ಕಡೆ ಚಿತ್ರೀಕರಣ ಮಾಡುತ್ತೇನೆ. ಎನ್‌ಆರ್‌'ಐ ಗಾಯತ್ರಿ ಎಂಬುವವರು ಈ ಚಿತ್ರದ ನಿರ್ಮಾಪಕರು. ಸೀತಾರಾಂ ಕ್ಯಾಮೆರಾ, ಗೌತಮ್ ಶ್ರೀವತ್ಸ ಸಂಗೀತ, ಕ್ರೇಜಿಮೈಂಡ್ ಶ್ರೀ ಸಂಕಲನಕಾರನಾಗಿ ಕೆಲಸ ಮಾಡಲಿದ್ದಾರೆ.

- ಆರ್. ಕೇಶವಮೂರ್ತಿ, ಕನ್ನಡಪ್ರಭ