ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ಸಾವಿಗೆ ಸ್ವತಃ ಮೋದಿ ಅವರೇ ಕಾರಣ ಎಂದು ಹೇಳಲಾದ ದಿನಪತ್ರಿಕೆಯೊಂದರ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅದರಲ್ಲಿ ಮೋದಿ ಮನೆಯಲ್ಲಿದ್ದ ಆಭರಣಗಳನ್ನು ಕದ್ದು ಮನೆ ಬಿಟ್ಟು ಓಡಿ ಹೋಗಿದ್ದರು. ಇದರಿಂದ ನೊಂದ ಅವರ ತಂದೆಗೆ ಹೃದಯಾಘಾತವಾಗಿತ್ತು. ಆದರೆ ಹಣ ಇರದ ಕಾರಣ ಹೆಚ್ಚಿನಕೊಡಿಸಲು ಸಾಧ್ಯವಾಗದೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.

ಈ ಬಗ್ಗೆ ಮೋದಿ ಸಹೋದರರು ಅವರ ವಿರುದ್ಧ ಎಫ್‌ಐಆರ್‌ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಲೇಖನದ ಮಧ್ಯಭಾಗದಲ್ಲಿ ನರೇಂದ್ರ ಮೋದಿ ಅವರು ಬಾಲಕನಾಗಿದ್ದಾಗ ತೆಗೆದಿದ್ದ ಜನಪ್ರಿಯ ಫೋಟೋವನ್ನು ಬಳಸಿಕೊಳ್ಳಲಾಗಿದೆ.

ಬೂಮ್‌ ಲೈವ್‌ ಸುದ್ದಿಸಂಸ್ಥೆಯು ಈ ಫೋಟೋದ ಹಿಂದಿನ ಸತ್ಯಾಸತ್ಯ ಪರಿಶೀಲಿಸಲು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ 2017ರ ಫೇಸ್‌ಬುಕ್‌ ಪೋಸ್ಟ್‌ವೊಂದು ಪತ್ತೆಯಾಗಿದೆ. ಆ ಪೋಸ್ಟ್‌ 1800 ಬಾರಿ ಶೇರ್‌ ಆಗಿದೆ. ವೈರಲ್‌ ಆಗಿರುವ ದಿನಪತ್ರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದಕ್ಕೆ ಸಾಕಷ್ಟುಪುರಾವೆಗಳು ಲಭ್ಯವಾಗುತ್ತವೆ.

ಲೇಖನದಲ್ಲಿ ‘ದೆಹಲಿ ನ್ಯೂಸ್‌ ನೆಟ್‌ವರ್ಕ್’ನಿಂದ ಈ ಲೇಖನ ಪಡೆದಿರುವುದಾಗಿ ಕ್ರೆಡಿಟ್‌ ನೀಡಲಾಗಿದೆ. ಆದರೆ ಆ ಹೆಸರಿನ ಯಾವುದೇ ಸುದ್ದಿಸಂಸ್ಥೆ ಇಲ್ಲ. ಅಲ್ಲದೆ ಈ ಬಗ್ಗೆ ಬೂಮ್‌, ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್‌ ಮೋದಿ ಅವರನ್ನೂ ಸಂಪರ್ಕಿಸಿ ಸ್ಪಷ್ಟನೆ ಪಡೆದಿದೆ. ಅವರು, ‘ಇದೊಂದು ದುರುದ್ದೇಶಪೂರಿತ ಸುಳ್ಳು ಸುದ್ದಿ. ಮೋದಿ ವಿರುದ್ಧ ಅವರ ಸಹೋದರಿಯರು ಅಥವಾ ಸಹೋದರರು ಯಾರೂ ಯಾವುದೇ ದೂರು ನೀಡಿಲ್ಲ’ ಎಂದಿದ್ದಾರೆ.

- ವೈರಲ್ ಚೆಕ್